
ಜವಾಹರಲಾಲ್ ನೆಹರೂ, ಅನಿಲ್ ಚೌಹಾಣ್
ನವದೆಹಲಿ: ಭಾರತ-ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಅಲ್ಪ ಮಟ್ಟಿನ ಸುಧಾರಣೆ ಕಂಡುಬಂದಿದ್ದರೂ, ಗಡಿಯಲ್ಲಿ ಉದ್ವಿಗ್ನತೆ ಇನ್ನೂ ಮುಂದುವರಿದಿದೆ. ಈ ನಡುವೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ 1954ರಲ್ಲಿ ಚೀನಾದೊಂದಿಗೆ ಪಂಚಶೀಲ ಒಪ್ಪಂದಕ್ಕೆ ಏಕೆ ಸಹಿ ಹಾಕಿದರು ಎಂಬುದರ ಕುರಿತು ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಮಾತನಾಡಿದ್ದಾರೆ.
ಡೆಹರಾಡೂನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಚೌಹಾಣ್, ಈ ಒಪ್ಪಂದವು ಉತ್ತರ ಗಡಿ ವಿವಾದವನ್ನು ಪರಿಣಾಮಕಾರಿಯಾಗಿ ಇತ್ಯರ್ಥಪಡಿಸುತ್ತದೆ ಎಂದು ನೆಹರೂ ಭಾವಿಸಿದ್ದರು. ಆದರೆ ಚೀನಾ ಈ ಬಗ್ಗೆ ವಿಭಿನ್ನ ದೃಷ್ಟಿಕೋನ ಹೊಂದಿತ್ತು ಎಂದು ಹೇಳಿದ್ದಾರೆ.
ಬ್ರಿಟಿಷರು ಭಾರತವನ್ನು ತೊರೆದ ನಂತರ, ಗಡಿಗಳನ್ನು ಗುರುತಿಸುವ ಕಠಿಣ ಮತ್ತು ಸವಾಲಿನ ಜವಾಬ್ದಾರಿ ನೆಹರೂ ಸರ್ಕಾರದ ಮೇಲಿತ್ತು. ಉಭಯ ದೇಶಗಳ (ಭಾರತ ಮತ್ತು ಚೀನಾ) ಗಡಿ ಭಾಗದ ಪೂರ್ವ ಭಾಗದಲ್ಲಿ ಮ್ಯಾಕ್‌ಮಹೋನ್ ರೇಖೆ ಇತ್ತು. ಲಡಾಖ್‌ನಲ್ಲಿ ಕೆಲವು ಭಾಗಗಳು ಭಾರತಕ್ಕೆ ಒಳಪಡಬೇಕಿತ್ತು. ಈ ವಿಚಾರ ನೆಹರೂ ಅವರಿಗೂ ತಿಳಿದಿತ್ತು. ಆದರೆ ಈ ಬಗ್ಗೆ ಸ್ಷಷ್ಟತೆಯಿರಲಿಲ್ಲ. ಹಾಗಾಗಿ ನೆಹರೂ ಪಂಚಶೀಲ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದರು ಚೌಹಾಣ್ ಹೇಳಿದ್ದಾರೆ.
ಈ ಒಪ್ಪಂದ ಉತ್ತರ ಗಡಿ ವಿವಾದ ಇತ್ಯರ್ಥಪಡಿಸಿದೆ ಎಂದು ನೆಗರೂ ಭಾವಿಸಿದ್ದರು. ಆದರೆ, ಈ ಒಪ್ಪಂದ ಕೇವಲ ವ್ಯಾಪಾರ ಉದ್ದೇಶಕ್ಕಾಗಿ ಮಾತ್ರ. ಗಡಿ ಹಂಚಿಕೆ ವಿಚಾರವಾಗಿ ತನ್ನ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂಬುವುದು ಚೀನಾದ ವಾದವಾಗಿತ್ತು ಎಂದು ಸಿಡಿಎಸ್ ಅಭಿಪ್ರಾಯಪಟ್ಟಿದ್ದಾರೆ.
1954ರಲ್ಲಿ ಎರಡೂ(ಭಾರತ–ಚೀನಾ) ದೇಶಗಳು ಪಂಚಶೀಲ ಒಪ್ಪಂದಕ್ಕೆ ಸಹಿ ಹಾಕಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.