ADVERTISEMENT

ಪನ್ಸಾರೆ ಪ್ರಕರಣ: ಮಹಾರಾಷ್ಟ್ರ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಪಿಟಿಐ
Published 14 ಮಾರ್ಚ್ 2019, 20:05 IST
Last Updated 14 ಮಾರ್ಚ್ 2019, 20:05 IST
ಗೋವಿಂದ ಪನ್ಸಾರೆ
ಗೋವಿಂದ ಪನ್ಸಾರೆ   

ಮುಂಬೈ:ವಿಚಾರವಾದಿ ಗೋವಿಂದ ಪನ್ಸಾರೆ ಹತ್ಯೆಯ ತನಿಖೆ ಮಂದಗತಿಯಲ್ಲಿ ಸಾಗುತ್ತಿರುವ ಕುರಿತುಬಾಂಬೆ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.

ಸಿಐಡಿಯ ವಿಶೇಷ ತನಿಖಾ ತಂಡ (ಎಸ್ಐಟಿ) ಗುರುವಾರ ನ್ಯಾಯಾಲಯಕ್ಕೆತನಿಖಾ ಪ್ರಗತಿಯ ವರದಿ ಸಲ್ಲಿಸಿತು.

‘ನಾಪತ್ತೆಯಾಗಿರುವ ಇಬ್ಬರು ಆರೋಪಿಗಳಲ್ಲಿ ಒಬ್ಬ ರಾಜ್ಯದಲ್ಲಿ ಸ್ಥಿರಾಸ್ತಿ ಹೊಂದಿದ್ದಾನೆ. ಆದ್ದರಿಂದ ಆತ ಎಲ್ಲಿದ್ದಾನೆ ಎನ್ನುವ ಮಾಹಿತಿ ಸಂಗ್ರಹಿಸಲು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ವರದಿ ಓದಿದ ನ್ಯಾಯಪೀಠ, ‘ಆರೋಪಿಗಳ ಪತ್ತೆಗೆ ಮಹಾರಾಷ್ಟ್ರ ಸರ್ಕಾರ ಪ್ರಾಥಮಿಕ ವಿಧಾನ ಅನುಸರಿಸುತ್ತಿರುವುದರಿಂದ ಅಪಹಾಸ್ಯಕ್ಕೆ ಗುರಿಯಾಗಿದೆ’ ಎಂದು ಹೇಳಿದೆ.

ಪ್ರಕರಣದ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಕಾರಣ ತಿಳಿಸಬೇಕೆಂದು ಬಾಂಬೆ ಹೈಕೋರ್ಟ್‌ನ ಎಸ್.ಸಿ. ಧರ್ಮಾಧಿಕಾರಿ ಹಾಗೂ ಬಿ.ಪಿ. ಕೊಲಾಬವಲ್ಲಾ ಅವರಿದ್ದ ಪೀಠ, ಮಹಾರಾಷ್ಟ್ರ ಗೃಹಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಮನ್ಸ್ ನೀಡಿದೆ. ಇದೇ 28ರಂದು ನ್ಯಾಯಾಲಯಕ್ಕೆ ವಿವರಣೆ ನೀಡುವಂತೆ ಸಮನ್ಸ್‌ನಲ್ಲಿ ಉಲ್ಲೇಖಿಸಲಾಗಿದೆ.

‘ನ್ಯಾಯಾಲಯ ಮಧ್ಯಪ್ರವೇಶಿಸಿದ ಬಳಿಕ ಅಪರಾಧ ಪ್ರಕರಣಗಳ ತನಿಖೆ ನಡೆಯುವುದಾದರೆ, ಪ್ರತಿ ಬಾರಿಯೂ ಸಂಕಷ್ಟದಿಂದ ಪಾರು ಮಾಡಲು ನ್ಯಾಯಾಲಯ ಮಧ್ಯಪ್ರವೇಶಿಸಬೇಕೆಂದರೆ... ಅದು ದುರಂತ. ಸಮಾಜಕ್ಕೆ ಎಂತಹ ಸಂದೇಶ ನೀಡಿದಂತಾಗುತ್ತದೆ’ ಎಂದು ಪ್ರಶ್ನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.