
ನವದೆಹಲಿ: ಬಿಹಾರ ಸಂಸದ ಪಪ್ಪು ಯಾದವ್ ಅವರ ಬಂಧನವು ರಾಜಕೀಯ ಸೇಡಿನ ಕೃತ್ಯವಾಗಿದ್ದು, ಸರ್ಕಾರದಿಂದ ಉತ್ತರದಾಯಿತ್ವ ಬಯಸುವ ಪ್ರತಿಯೊಂದು ಧ್ವನಿಯನ್ನು ಬೆದರಿಸುವ ಮತ್ತು ಅಡಗಿಸುವ ಉದ್ದೇಶದ್ದಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
ಇತ್ತೀಚೆಗೆ ಪಟ್ನಾದಲ್ಲಿ ನಿಗೂಢವಾಗಿ ಮೃತಪಟ್ಟ ನೀಟ್ ಆಕಾಂಕ್ಷಿಗೆ ನ್ಯಾಯ ಒದಗಿಸಲು ಪಪ್ಪು ಯಾದವ್ ಧ್ವನಿಯೆತ್ತಿದ್ದರು. ಈ ಅನುಮಾನಾಸ್ಪದ ಸಾವು ಮತ್ತು ನಂತರದ ಕ್ರಮಗಳು, ವ್ಯವಸ್ಥೆಯು ಆಳದಲ್ಲಿ ಕೊಳೆತಿರುವುದನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ ಎಂದು ಎಂದು ರಾಹುಲ್ ಗಾಂಧಿ ‘ಎಕ್ಸ್’ ಮಾಡಿದ್ದಾರೆ.
‘ಇದು ರಾಜಕೀಯವಲ್ಲ, ನ್ಯಾಯದ ವಿಚಾರವಾಗಿದೆ. ಬಿಹಾರದ ಹೆಣ್ಣುಮಕ್ಕಳ ಘನತೆ ಮತ್ತು ಸುರಕ್ಷತೆಯ ಪ್ರಶ್ನೆಯಾಗಿದೆ’ ಎಂದು ಅವರು ಹೇಳಿದ್ದಾರೆ.
‘ಸಂತ್ರಸ್ತರ ಕುಟುಂಬವು ನ್ಯಾಯಯುತ ತನಿಖೆಗಾಗಿ ಆಗ್ರಹಿಸಿದಾಗ, ಬಿಜೆಪಿ ಮತ್ತು ಎನ್‌ಡಿಎ ಅಧಿಕಾರವನ್ನು ಬಳಸಿಕೊಂಡು ಪ್ರಕರಣವನ್ನು ಹಳಿ ತಪ್ಪಿಸುವುದು ಮತ್ತು ಕುಟುಂಬಕ್ಕೆ ಕಿರುಕುಳ ನೀಡುವ ಅದೇ ಹಳೆಯ ನಾಟಕವನ್ನು ಆಡುತ್ತಿದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಪಪ್ಪು ನ್ಯಾಯಾಂಗ ವಶಕ್ಕೆ
ಸಂಸದ ಪಪ್ಪು ಯಾದವ್ ಅವರನ್ನು ಪಟ್ನಾ ನ್ಯಾಯಾಲಯವು ಶನಿವಾರ ಎರಡು ದಿನಗಳ ಅವಧಿಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.