ADVERTISEMENT

ಸುಲಿಗೆ ಪ್ರಕರಣ: ಪೊಲೀಸರ ಮುಂದೆ ಹಾಜರಾದ ಪರಮ್‌ ಬೀರ್‌ ಸಿಂಗ್‌

ಪಿಟಿಐ
Published 26 ನವೆಂಬರ್ 2021, 9:15 IST
Last Updated 26 ನವೆಂಬರ್ 2021, 9:15 IST
ಮುಂಬೈನ ಕಂಡಿವಲಿಯಲ್ಲಿ ಮುಂಬೈ ಪೊಲೀಸ್ ಅಪರಾಧ ವಿಭಾಗದ ಘಟಕ-11 ರ ಮುಂದೆ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಗುರುವಾರ ಹಾಜರಾದರು. ಪಿಟಿಐ ಚಿತ್ರ.
ಮುಂಬೈನ ಕಂಡಿವಲಿಯಲ್ಲಿ ಮುಂಬೈ ಪೊಲೀಸ್ ಅಪರಾಧ ವಿಭಾಗದ ಘಟಕ-11 ರ ಮುಂದೆ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಗುರುವಾರ ಹಾಜರಾದರು. ಪಿಟಿಐ ಚಿತ್ರ.   

ಮುಂಬೈ: ತಮ್ಮ ವಿರುದ್ಧ ದಾಖಲಾದ ಸುಲಿಗೆ ಪ್ರಕರಣದ ತನಿಖೆಯ ವಿಚಾರಣೆಗೆ ಸಂಬಂಧಿಸಿದಂತೆ ಮುಂಬೈನ ಮಾಜಿ ಪೊಲೀಸ್‌ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಶುಕ್ರವಾರ ಠಾಣೆಯ ಪೊಲೀಸ್‌ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಪರಮ್‌ ಬೀರ್‌ ಅವರು ತಮ್ಮ ವಕೀಲರೊಡನೆ ಬೆಳಿಗ್ಗೆ 10.30ಕ್ಕೆ ಠಾಣೆ ನಗರ ಪೊಲೀಸ್ ಠಾಣೆಯನ್ನು ತಲುಪಿದರು. ವಲಯ ಡಿಸಿಪಿ ಅವಿನಾಶ್‌ ಅಂಬುರೆ ಅವರ ನೇತೃತ್ವದಲ್ಲಿ ತನಿಖಾ ತಂಡ ಪರಮ್‌ ಬೀರ್‌ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿತು ಎಂದು ಮೂಲಗಳು ತಿಳಿಸಿವೆ.

ಈ ವರ್ಷದ ಜುಲೈನಲ್ಲಿ ಬಿಲ್ಡರ್‌ ಮತ್ತು ಬುಕ್ಕಿ ಕೇತನ್‌ ತನ್ನಾ (54) ಅವರು ದಾಖಲಿಸಿದ ದೂರಿನ ಆಧಾರದಲ್ಲಿ ಠಾಣೆ ನಗರ ಪೊಲೀಸರು ಪರಮ್‌ ಬೀರ್‌ ಸಿಂಗ್‌ ಅವರ ವಿರುದ್ಧ ಸುಲಿಗೆ ‍ಪ್ರಕರಣ ದಾಖಲಿಸಿದ್ದರು.

ADVERTISEMENT

ಈ ಪ್ರಕರಣದಲ್ಲಿ ಇದುವರೆಗೆ ಇಬ್ಬರು ಬಂಧಿತರಾಗಿದ್ದು,ಒಬ್ಬರು ಎರಡು ದಿನಗಳ ಹಿಂದೆ ನ್ಯಾಯಾಲಯವೊಂದರಿಂದ ಜಾಮೀನು ಪಡೆದಿದ್ದರು. ಪರಮ್‌ ಬೀರ್‌ ಅವರ ವಿರುದ್ಧ ಮಹಾರಾಷ್ಟ್ರದಲ್ಲಿ ಐದು ಸುಲಿಗೆ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಎರಡು ಪ್ರಕರಣಗಳು ಠಾಣೆಯಲ್ಲಿವೆ.

ಸುಲಿಗೆ ಪ್ರಕರಣದ ತನಿಖೆಗೆ ಠಾಣೆ ಪೊಲೀಸರು ವಿಶೇಷ ತನಿಖಾ ತಂಡವೊಂದನ್ನು (ಎಸ್‌ಐಟಿ) ರಚಿಸಿದ್ದಾರೆ. ಪ್ರಕರಣ ಸಂಬಂಧ ಪರಾರಿಯಾಗಿದ್ದ ಪರಮ್‌ ಅವರು ಕೆಲವು ತಿಂಗಳುಗಳ ಅಜ್ಞಾತವಾಸದಲ್ಲಿದ್ದು,ಗುರುವಾರ ಮುಂಬೈಗೆ ಬಂದಿಳಿದರು.

ಬಳಿಕ ಅವರು ಮುಂಬೈನ ಅಪರಾಧ ವಿಭಾಗದಿಂದ ಸುಲಿಗೆ ‍ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಏಳು ತಾಸು ವಿಚಾರಣೆ ಎದುರಿಸಿದರು. ಕೆಲವು ದಿನಗಳ ಹಿಂದೆ ಸುಪ್ರೀಂಕೋರ್ಟ್‌ ಪರಮ್‌ ಅವರಿಗೆ ಬಂಧನದಿಂದ ರಕ್ಷಣೆ ನೀಡಿದೆ.

ಏಕ ಸದಸ್ಯ ಸಮಿತಿ ಸೂಚನೆ: ನವೆಂಬರ್‌ 29ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಮೂರ್ತಿ ಕೆ.ಯು. ಚಾಂಡಿವಾಲ್ ನೇತೃತ್ವದ ಏಕ ಸದಸ್ಯ ಸಮಿತಿಯು ಪರಮ್‌ ಬೀರ್ ಸಿಂಗ್ ಅವರಿಗೆ ಸೂಚಿಸಿದೆ.

ಮಹಾರಾಷ್ಟ್ರದ ಆಗಿನ ಗೃಹ ಸಚಿವ ಅನಿಲ್‌ ದೇಶಮುಖ್‌ ವಿರುದ್ಧ ಪರಮ್‌ ಬೀರ್‌ ಸಿಂಗ್ ಅವರು ಭ್ರಷ್ಟಾಚಾರ ಆರೋಪ ಮಾಡಿದ್ದ ಪ್ರಕರಣದ ವಿಚಾರಣೆಯನ್ನು ಈ ಸಮಿತಿ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.