
ಸಂಸತ್ ಭವನದ ಹೊರಗೆ ಭದ್ರತಾ ಸಿಬ್ಬಂದಿ
(ಪಿಟಿಐ ಸಂಗ್ರಹ ಚಿತ್ರ)
ನವದೆಹಲಿ: ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.
ಈ ಪೈಕಿ ಲೋಕಸಭೆ ಕಲಾಪದ ವೇಳೆ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದಿದ್ದ ಆರೋಪಿ ಡಿ. ಮನೋರಂಜನ್ ಅವರ ಸಹಪಾಠಿ ಬಾಗಲಕೋಟೆಯ ಸಾಯಿಕೃಷ್ಣ ಮತ್ತು ಉತ್ತರ ಪ್ರದೇಶ ಮೂಲದ ಇನ್ನೊಬ್ಬನನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಪ್ರಶ್ನಿಸಿದೆ ಎಂದು ಮೂಲಗಳು ತಿಳಿಸಿವೆ.
ಈಗ ಅಳಿಸಿ ಹಾಕಲಾಗಿರುವ 'ಭಗತ್ ಸಿಂಗ್ ಫ್ಯಾನ್ ಕ್ಲಬ್' ಹೆಸರಿನ ಫೇಸ್‌ಬುಕ್ ಪುಟದಲ್ಲಿ ದಾಳಿಗೂ ಮುನ್ನ ಶಂಕಿತರು ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ಡಿ. ಮನೋರಂಜನ್ ಡೈರಿಯಲ್ಲಿ ಹೆಸರಿರುವ ಬಾಗಲಕೋಟೆಯ ಸಾಯಿಕೃಷ್ಣ ಅವರನ್ನು ದೆಹಲಿ ಪೊಲೀಸರು ಬುಧವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದ್ದರು. ಬೆಂಗಳೂರಿನ ಬಿಇಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದಲ್ಲದೇ, ಒಂದೇ ಕೊಠಡಿಯಲ್ಲಿ ವಾಸವಾಗಿದ್ದರು ಎಂದು ಗೊತ್ತಾಗಿದೆ.
ಸಂಸತ್ ಮೇಲಿನ ದಾಳಿಯ 22ನೇ ವರ್ಷದ ಕಹಿ ನೆನಪಿನ ದಿನವೇ ಭಾರಿ ಭದ್ರತಾ ಲೋಪದ ಘಟನೆಗೆ ಲೋಕಸಭೆ ಸಾಕ್ಷಿಯಾಗಿತ್ತು. ಡಿಸೆಂಬರ್ 13ರಂದು ಕಲಾಪ ನಡೆಯುತ್ತಿರುವಾಗಲೇ ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದು ಘೋಷಣೆಗಳನ್ನು ಕೂಗುತ್ತಾ 'ಸ್ಮೋಕ್ ಕ್ಯಾನ್' (ಹಳದಿ ಬಣ್ಣದ ಹೊಗೆ) ಹಾರಿಸಿ ದಾಂಧಲೆ ಎಬ್ಬಿಸಿದ್ದರು. ಇದೇ ಸಮಯದಲ್ಲಿ ಸಂಸತ್‌ನ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿತ್ತು.
ಪ್ರಕರಣ ಸಂಬಂಧ ಈವರೆಗೆ ಆರು ಮಂದಿಯನ್ನು (ಲಲಿತ್ ಝಾ, ಮಹೇಶ್ ಕುಮಾವತ್, ಡಿ.ಮನೋರಂಜನ್, ಸಾಗರ್ ಶರ್ಮಾ, ಅಮೋಲ್ ಶಿಂಧೆ, ನೀಲಂ ಶರ್ಮಾ) ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.