
ಲೋಕಸಭೆಯಲ್ಲಿ ರಾಹುಲ್ ಗಾಂಧಿ
ಪಿಟಿಐ ಚಿತ್ರ
ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಲಡಾಖ್ ಬಿಕ್ಕಟ್ಟಿನ ಬಗ್ಗೆ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಸ್ತಾಪಿಸಿದ ವಿಷಯ ಇಂದೂ (ಮಂಗಳವಾರ) ಸಹ ಭಾರಿ ಕೋಲಾಹಲಕ್ಕೆ ಕಾರಣವಾಯಿತು.
ಭಾರತ ಮತ್ತು ಚೀನಾ ನಡುವೆ 2020ರಲ್ಲಿ ಲಡಾಖ್‌ನಲ್ಲಿ ನಡೆದ ಸೇನಾ ತಿಕ್ಕಾಟದ ಬಗ್ಗೆ, ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರ ಅಪ್ರಕಟಿತ ಪುಸ್ತಕದಲ್ಲಿನ ಅಂಶಗಳ ಕುರಿತು ನಿಯತಕಾಲಿಕವೊಂದರಲ್ಲಿ ಪ್ರಕಟವಾಗಿರುವ ಲೇಖನವನ್ನು ಸೋಮವಾರ ರಾಹುಲ್ ಪ್ರಸ್ತಾಪಿಸಿದ್ದರು. ಇದು ಭಾರಿ ಗದ್ದಲ ಸೃಷ್ಟಿಸಿತ್ತು.
ಮಂಗಳವಾರ ಕೂಡ ಲೋಕಸಭೆಯಲ್ಲಿ ಈ ವಿಚಾರದ ಬಗ್ಗೆ ಮಾತನಾಡಲು ರಾಹುಲ್ ಗಾಂಧಿಗೆ ಅವಕಾಶ ನೀಡಲಿಲ್ಲ. ವಿರೋಧ ಪಕ್ಷದ ಸಂಸದರು ಕಾಗದಗಳನ್ನು ಹರಿದು ಸಭಾಪತಿ ಕುರ್ಚಿಯತ್ತ ಎಸೆದು ಆಕ್ರೋಶ ವ್ಯಕ್ತಡಿಸಿದ್ದಾರೆ. ಸಭಾಪತಿ ಸ್ಥಾನದಲ್ಲಿ ದಿಲೀಪ್ ಸೈಕಿಯಾ ಇದ್ದರು.
ಕಲಾಪದಲ್ಲಿ ಗದ್ದಲ ಸೃಷ್ಟಿಸಿ, ಅಶಿಸ್ತು ಪ್ರದರ್ಶಿಸಿದ್ದಕ್ಕಾಗಿ ವಿರೋಧ ಪಕ್ಷದ ಸಂಸದರಾದ ಹಿಬಿ ಈಡನ್, ಅಮರಿಂದರ್ ಸಿಂಗ್, ರಾಜಾ ವಾರಿಂಗ್, ಮಾಣಿಕ್ಕಂ ಟ್ಯಾಗೋರ್, ಗುರ್ಜೀತ್ ಸಿಂಗ್ ಔಜ್ಲಾ ಮತ್ತು ಕಿರಣ್ ಕುಮಾರ್ ರೆಡ್ಡಿ ಸೇರಿದಂತೆ ಎಸ್.ವೆಂಕಟೇಶ್ ಅವರನ್ನು ಉಳಿದ ಅವಧಿಯ ಸದನದ ಕಲಾಪಗಳಿಂದ ಅಮಾನತು ಮಾಡಲಾಗಿದೆ ಎಂದು ಸೈಕಿಯಾ ಹೇಳಿದ್ದಾರೆ.
ಲೋಕಸಭೆಯಲ್ಲಿ ಭಾರಿ ಗದ್ದಲ ಉಂಟಾಗಿದ್ದರಿಂದ ಈ ದಿನದ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.