ನವದೆಹಲಿ: ಸಂಸತ್ತು ಕಾರ್ಯನಿರ್ವಹಿಸದಿದ್ದಾಗ ಸರ್ಕಾರವೇ ಅತಿ ದೊಡ್ಡ ಫಲಾನುಭವಿ ಎಂದು ತೃಣಮೂಲ ಕಾಂಗ್ರೆಸ್‌ನ ಸಂಸದ ಡೆರೆಕ್ ಒಬ್ರಯಾನ್ ಬುಧವಾರ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಮುಂಗಾರು ಅಧಿವೇಶನದ ಎರಡು ದಿನ ವ್ಯರ್ಥವಾಗಿದ್ದು, ಇದಕ್ಕೆ ಸರ್ಕಾರವೇ ಕಾರಣ ಎಂದು ಅವರು ದೂರಿದ್ದಾರೆ.
‘ಕೇಂದ್ರ ಸರ್ಕಾರದಿಂದ ಎರಡು ದಿನಗಳ ಕಲಾಪ ವ್ಯರ್ಥವಾಗಿದೆ. ಸಂಸತ್ತು ಕಾರ್ಯನಿರ್ವಹಿಸದೇ ಇದ್ದಾಗ ಲಾಭ ಯಾರಿಗೆ? ಅಧಿಕಾರದಲ್ಲಿರುವ ಸರ್ಕಾರಕ್ಕೆ’ ಎಂದು ಅವರು ಬರೆದುಕೊಂಡಿದ್ದಾರೆ.
‘ಸರ್ಕಾರ ಸಂಸತ್ತಿಗೆ ಹೊಣೆಗಾರ; ಸಂಸತ್ತು ಜನರಿಗೆ ಹೊಣೆಗಾರ. ಸಂಸತ್ತು ಕಾರ್ಯನಿರ್ವಹಿಸಿದ್ದರೆ. ಸರ್ಕಾರ ಯಾರಿಗೂ ಹೊಣೆಗಾರನಲ್ಲ’ ಎಂದು ಅವರು ಹೇಳಿದ್ದಾರೆ.
ತಮ್ಮ ಬ್ಲಾಗ್ ಬರಹವನ್ನು ಹಂಚಿಕೊಂಡಿರುವ ಅವರು, ಮುಂಗಾರು ಅಧಿವೇಶನ ಸುಮಾರು 190 ಗಂಟೆ ನಡೆಯುತ್ತದೆ. ಇದರಲ್ಲಿ ಶೇ 70ರಷ್ಟು ಸರ್ಕಾರಕ್ಕೆ ಮೀಸಲಾಗಿದೆ.
ಪ್ರಶ್ನೋತ್ತರ ಅವಧಿಯಲ್ಲಿ ಸುಮಾರು ಅರ್ಧದಷ್ಟು ಪ್ರಶ್ನೆಗಳು ಮತ್ತು ಶೂನ್ಯ ವೇಳೆಯಲ್ಲಿ ಬರುವ ನೋಟಿಸ್‌ಗಳ ಸಂಖ್ಯೆಯಲ್ಲಿ ಅರ್ಧದಷ್ಟು ವಿರೋಧ ಪಕ್ಷದ ಸಂಸದರು ಸಲ್ಲಿಸುತ್ತಾರೆ. ವಿರೋಧ ಪಕ್ಷದ ಸದಸ್ಯರು ಪ್ರಶ್ನೆಗಳನ್ನು ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಎತ್ತಲು 31 ಗಂಟೆಗಳು ಮೀಸಲಿಡಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಕೇಂದ್ರ ಸರ್ಕಾರವು ಒಟ್ಟು 190 ಗಂಟೆಗಳಲ್ಲಿ 135 ಗಂಟೆಗಳನ್ನು ಸರ್ಕಾರಿ ವ್ಯವಹಾರ ಮತ್ತು ಇತರ ವಿಷಯಗಳಿಗೆ ತೆಗೆದುಕೊಳ್ಳುತ್ತದೆ, ಇದು ಒಟ್ಟು ಸಮಯದ ಸುಮಾರು 70 ಪ್ರತಿಶತ ಎಂದು ಒಬ್ರಯಾನ್ ಹೇಳಿದ್ದಾರೆ.
ಲಭ್ಯವಿರುವ ಸಮಯವನ್ನು ಕಡಿತಗೊಳಿಸುವ ಕಾನೂನುಬದ್ಧ ಅಧಿಕಾರ ಸರ್ಕಾರಕ್ಕಿದೆ. ವಿರೋಧ ಪಕ್ಷಗಳಿಗೆ ಸ್ವಲ್ಪ ಹೆಚ್ಚಿನ ಸಮಯವನ್ನು ನೀಡಿ ಎಂದು ಅವರು ಮನವಿ ಮಾಡಿದ್ದಾರೆ.
ತುರ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳ ಕುರಿತು ಚರ್ಚೆಗಳನ್ನು ನಡೆಸಲು ಪ್ರತಿ ಸದನದಲ್ಲಿ ಪ್ರತಿ ವಾರ ನಾಲ್ಕು ಗಂಟೆಗಳನ್ನು ಕಾಯ್ದಿರಿಸಬೇಕು. ಗಮನ ಸೆಳೆಯುವ ನಿರ್ಣಯಕ್ಕಾಗಿ ಎರಡು ಗಂಟೆಗಳನ್ನು ಮೀಸಲಿಡಬೇಕು’ ಎಂದು ಒಬ್ರಯಾನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.