ಕಿರಣ್ ರಿಜಿಜು
ನವದೆಹಲಿ: ಸದನದ ಕಲಾಪಕ್ಕೆ ನಿರಂತವಾಗಿ ಅಡ್ಡಿ ಉಂಟಾಗುತ್ತಿದ್ದರೆ ಅದರಿಂದ ಸರ್ಕಾರಕ್ಕಿಂತ ವಿರೋಧ ಪಕ್ಷಗಳಿಗೇ ಹೆಚ್ಚು ನಷ್ಟವಾಗಲಿದೆ. ಸರ್ಕಾರವನ್ನು ಹೊಣೆ ಮಾಡುವ ಪ್ರಮುಖ ಅವಕಾಶವನ್ನು ವಿಪಕ್ಷಗಳು ಕಳೆದುಕೊಳ್ಳಲಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಅಭಿಪ್ರಾಯಪಟ್ಟರು.
ಮೊದಲ ವಾರದ ಮುಂಗಾರು ಅಧಿವೇಶನದ ಬಹುತೇಕ ಸಮಯವು ವಿರೋಧ ಪಕ್ಷಗಳ ಸಂಸದರ ಪ್ರತಿಭಟನೆಯಲ್ಲೇ ಕಳೆದು ಹೋಗಿದ್ದನ್ನು ಪರೋಕ್ಷವಾಗಿ ಉಲ್ಲೇಖಿಸಿ ರಿಜಿಜು ಅವರು ಈ ಹೇಳಿಕೆ ನೀಡಿದರು.
ಪ್ರೈಮ್ ಪಾಯಿಂಟ್ ಫೌಂಡೇಶನ್ ಶನಿವಾರ ಆಯೋಜಿಸಿದ್ದ ಸಂಸದ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಾಪವು ಮುಂದೂಡಲ್ಪಟ್ಟಾಗ ಕೆಲವು ಅಧಿಕಾರಿಗಳು ಹೇಗೆ ಸಮಾಧಾನದ ನಿಟ್ಟುಸಿರು ಬಿಡುತ್ತಾರೆ ಎಂಬುದನ್ನು ನೆನೆದರು.
‘ಕಲಾಪವು ಮುಂದೂಡಲ್ಪಟ್ಟಾಗ ಅಧಿಕಾರಿಗಳು ನಿಟ್ಟುಸಿರು ಬಿಡುತ್ತಾರೆ. ಕಲಾಪ ನಡೆದಲ್ಲಿ ಸಚಿವರನ್ನು ಕಠಿಣ ಪ್ರಶ್ನೆಗಳ ಮೂಲಕ ಕಟ್ಟಿಹಾಕಬಹುದು. ಆದರೆ ಕಲಾಪ ಆರಂಭವಾದ ಕೆಲವೇ ನಿಮಿಷಗಳಲ್ಲಿ ಅದು ಮುಂದೂಡಲ್ಪಟ್ಟರೆ ಯಾವುದೇ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ. ಆಗ ವಿರೋಧ ಪಕ್ಷಗಳು ತಮಗೆ ಸಿಗುವ ಅಮೂಲ್ಯ ಅವಕಾಶವನ್ನು ಕಳೆದುಕೊಳ್ಳುತ್ತವೆ’ ಎಂದು ಅವರು ಹೇಳಿದರು.
ಕಲಾಪಕ್ಕೆ ಅಡ್ಡಿಪಡಿಸುವವರು ಸರ್ಕಾರಕ್ಕೆ ನಷ್ಟವುಂಟು ಮಾಡಿರುವುದಾಗಿ ಭಾವಿಸುತ್ತಾರೆ, ವಾಸ್ತವದಲ್ಲಿ ಅವರು ತಮ್ಮದೇ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿರುತ್ತಾರೆ ಎಂದು ಪ್ರತಿಪಾದಿಸಿದರು.
ಯಾವುದೇ ಪ್ರಜಾಪ್ರಭುತ್ವದಲ್ಲಿ ಸರ್ಕಾರವು ಸಂಸತ್ತಿನ ಮೂಲಕ ಜನರಿಗೆ ಉತ್ತರದಾಯಿಯಾಗಿ ಇರಬೇಕು. ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಕ್ಕಾಗಿ ಸಂಸತ್‌ನಲ್ಲಿ ಕಲಾಪ ಸುಗಮವಾಗಿ ನಡೆಯುವುದು ಅತ್ಯಗತ್ಯ ಎಂದು ಹೇಳಿದರು.
‘ನಾನು ವಿರೋಧ ಪಕ್ಷಗಳ ಸಂಸದರನ್ನು ಎದುರಾಳಿಗಳು ಎಂದು ಎಂದೂ ಪರಿಗಣಿಸಿಲ್ಲ. ನಾವೆಲ್ಲರೂ ಸಹೋದ್ಯೋಗಿಗಳು. ನಾವು ರಾಜಕೀಯ ಎದುರಾಳಿಗಳಾಗಿರಬಹುದು; ಆದರೆ ನಮ್ಮ ನಡುವೆ ಯಾವುದೇ ಶತ್ರುತ್ವ ಇಲ್ಲ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.