ಡಾ. ಅಂಬೇಡ್ಕರ್ ಚಿತ್ರ ಹಿಡಿದುಕೊಂಡು ಪ್ರಿಯಾಂಕಾ ಗಾಂಧಿ ಪ್ರತಿಭಟನೆ
– ಪಿಟಿಐ ಚಿತ್ರ
ನವದೆಹಲಿ: ಗೃಹ ಸಚಿವ ಅಮಿತ್ ಶಾ ಅವರನ್ನು ರಕ್ಷಿಸಲು, ರಾಹುಲ್ ಗಾಂಧಿ ತಮ್ಮ ಪಕ್ಷದ ಸಂಸದರನ್ನು ತಳ್ಳಿದ್ದಾರೆ ಎನ್ನುವ ಪಿತೂರಿ ಬಿಜೆಪಿ ನಡೆಸುತ್ತಿದೆ ಎಂದು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
‘ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ವಿರೋಧ ಪಕ್ಷಗಳ ಸಂಸದರ ವಿರುದ್ಧ ಗೂಂಡಾಗಿರಿ ಪ್ರದರ್ಶಿಸಿದ್ದಾರೆ. ನಮ್ಮನ್ನು ಸಂಸತ್ ಪ್ರವೇಶವನ್ನು ತಡೆದಿದ್ದಾರೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿಯವರು ಬಿ.ಆರ್. ಅಂಬೇಡ್ಕರ್ ಅವರ ಚಿತ್ರವನ್ನು ಹಿಡಿದುಕೊಂಡು ಜೈ ಭೀಮ್ ಘೋಷಣೆ ಕೂಗುತ್ತಾ ಸಂಸತ್ ಭವನದ ಒಳಗೆ ಪ್ರವೇಶಿಸುತ್ತಿದ್ದರು. ಈ ವೇಳೆ ಅವರನ್ನು ತಡೆಯಲಾಗಿದೆ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.
‘ನಾವು ಹಲವು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಅಂದೆಲ್ಲಾ ಯಾವುದೇ ಅಡೆತಡೆ ಇಲ್ಲದೇ ಸಂಸತ್ ಪ್ರವೇಶ ಮಾಡಿದ್ದೇವೆ. ಪ್ರತಿದಿನ 10.30ರಿಂದ 11 ಗಂಟೆವರೆಗೆ ಸಂಸತ್ ಆವರಣದಲ್ಲಿ ಶಾಂತಿಯುತ ಪ್ರತಿಭಟನೆ ನಡೆಯುತ್ತದೆ. ಆದರೆ ಇಂದು ಮೊದಲ ಬಾರಿಗೆ, ಅವರು (ಬಿಜೆಪಿ ಸಂಸದರು) ಎಲ್ಲರನ್ನೂ ತಡೆದರು, ತಳ್ಳಿದರು, ಗೂಂಡಾಗಿರಿ ಪ್ರದರ್ಶಿಸಿದರು’ ಎಂದು ಹೇಳಿದ್ದಾರೆ.
‘ಈಗ ಅಮಿತ್ ಶಾ ಅವರನ್ನು ರಕ್ಷಿಸಲು ಅಣ್ಣ ಯಾರನ್ನೋ ತಳ್ಳಿದ್ದಾರೆ ಎಂದು ಪಿತೂರಿ ನಡೆಸುತ್ತಿದ್ದಾರೆ. ನನ್ನ ಕಣ್ಣ ಮುಂದೆಯೇ ಖರ್ಗೆ ಅವರನ್ನು ತಳ್ಳಿದ್ದಾರೆ. ಅವರು ನೆಲಕ್ಕೆ ಬಿದ್ದಿದ್ದಾರೆ. ಬಳಿಕ ಸಿಪಿಐ (ಎಂ) ಸಂಸದರೊಬ್ಬರನ್ನು ದೂಡಿದ್ದಾರೆ. ಅವರು ಖರ್ಗೆಯವರ ಮೇಲೆ ಬಿದ್ದಿದ್ದಾರೆ. ಖರ್ಗೆ ಅವರ ಕಾಲು ಮುರಿಯಿತು ಎಂದು ನಾನು ಭಾವಿಸಿದೆ. ಅವರ ನೋವು ಮುಖದಲ್ಲಿ ಕಾಣಿಸುತ್ತಿತ್ತು. ಕೂಡಲೇ ಅವರಿಗೆ ಖುರ್ಚಿ ತರಲಾಯಿತು’ ಎಂದು ಪ್ರಿಯಾಂಕಾ ಘಟನೆಯನ್ನು ವಿವರಿಸಿದ್ದಾರೆ.
‘ಇದೊಂದು ಪಿತೂರಿ. ಜೈ ಭೀಮ್ ಎಂದು ಘೋಷಣೆ ಕೂಗುತ್ತಿದ್ದ ನಮ್ಮನ್ನು ತಡೆದವರಿಗೆ ನಾವು ಸವಾಲು ಹಾಕಿದೆವು. ಅವರು ಯಾಕೆ ಜೈ ಭೀಮ್ ಎಂದು ಹೇಳುತ್ತಿಲ್ಲ?’ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.
‘ನಾವು ಏನನ್ನೂ ಹೇಳಿಲ್ಲ. ನಾನು ಘೋಷಣೆಯನ್ನು ಮೊಳಗಿಸುತ್ತಲೇ ಇದ್ದೆವು. ಸಂವಿಧಾನ ರಕ್ಷಣೆಗೆ ಹೋರಾಟ ಮಾಡುತ್ತಿದ್ದೆವು. ಬಿಜೆಪಿಯವರು ಸಂವಿಧಾನವನ್ನು ರಕ್ಷಿಸುತ್ತಾರೆ ಎಂಬ ಗೊಂದಲ ಜನರಲ್ಲಿ ಇದ್ದರೆ, ಆ ಗೊಂದಲವು ಕೊನೆಗೊಳ್ಳಬೇಕು’ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.