ADVERTISEMENT

ಸಂಸತ್ ಭದ್ರತಾ ಲೋಪ | ಖ್ಯಾತಿಗಾಗಿ ಆರೋಪಿಗಳ ಕೃತ್ಯ: ದೆಹಲಿ ಪೊಲೀಸರ ಮಾಹಿತಿ

ಪಿಟಿಐ
Published 23 ಜನವರಿ 2024, 16:07 IST
Last Updated 23 ಜನವರಿ 2024, 16:07 IST
   

ನವದೆಹಲಿ: ‘ಸಂಸತ್ತಿನಲ್ಲಿ ನಡೆದ ಭದ್ರತಾ ಲೋಪ ಪ್ರಕರಣದ ಆರು ಆರೋಪಿಗಳು ಖ್ಯಾತಿಗಾಗಿ ಏನಾದರೂ ದೊಡ್ಡದು ಮಾಡಲು ನಿರ್ಧರಿಸಿದ್ದರು. ಅಲ್ಲದೆ ಸ್ವಯಂ ಪ್ರೇರಣೆಯಿಂದ ಹಣವನ್ನು ಸಂಗ್ರಹಿಸಿದ್ದರು’ ಎಂದು ಈ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. 

ತಾವು ಯಾವುದೇ ‘ಗಂಭೀರವಾದ ಅಪರಾಧ’ ಎಸಗಿಲ್ಲ ಎಂದು ತಿಳಿದುಕೊಂಡಿದ್ದ ಆರೋಪಿಗಳು, ಒಂದು ವೇಳೆ ಬಂಧನವಾದರೂ, ತಮ್ಮನ್ನು ಬಿಟ್ಟು ಕಳುಹಿಸಲಾಗುತ್ತದೆ ಎಂದು ಆರೋಪಿಗಳು ಭಾವಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. 

ಈ ಪ್ರಕರಣದ ರೂವಾರಿ ಎಂದು ಶಂಕಿಸಲಾದ ಮನೋರಂಜನ್ ಡಿ, ಪ್ರಖ್ಯಾತಿಗಾಗಿ ಏನನ್ನಾದರೂ ದೊಡ್ಡದನ್ನು ಮಾಡಲು ತಮ್ಮದೇ ಆಲೋಚನೆ ಇರುವ ಜನರನ್ನು ಹುರಿದುಂಬಿಸಲು ಫೇಸ್‌ಬುಕ್‌ನಲ್ಲಿ ‘ಭಗತ್ ಸಿಂಗ್ ಫ್ಯಾನ್ ಕ್ಲಬ್’ ಅನ್ನು ಸೃಷ್ಟಿಸಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ADVERTISEMENT

ಈ ಎಲ್ಲ ಆರೋಪಿಗಳು ಕಳೆದ ನಾಲ್ಕು ವರ್ಷಗಳಿಂದ ಪರಿಚಿತರಾಗಿದ್ದು, ಸಂಸತ್ತಿನ ಭದ್ರತಾ ವ್ಯವಸ್ಥೆಯನ್ನು ಭೇದಿಸುವ ಕೃತ್ಯದ ಯೋಜನೆಯನ್ನು ಒಂದು ವರ್ಷದ ಹಿಂದೆ ರೂಪಿಸಿದ್ದರು. 

ಸಂಸತ್ತಿನ ಭದ್ರತಾ ವ್ಯವಸ್ಥೆಯನ್ನು ಭೇದಿಸುವ ಅಕ್ರಮ ಚಟುವಟಿಕೆಯ ಅಭಿಪ್ರಾಯಕ್ಕೆ ಫ್ಯಾನ್‌ಕ್ಲಬ್ ಗ್ರೂಪ್‌ನ ಹಲವರು ಒಪ್ಪಿಕೊಳ್ಳಲಿಲ್ಲ. ಇದರಿಂದಾಗಿ ಡಿಸೆಂಬರ್ 13ರಂದು ಈ ಘಟನೆ ನಡೆಯುವ ಮುನ್ನ ಹಲವು ಸದಸ್ಯರು ಗ್ರೂಪ್ ತೊರೆದರು. ಮನೋರಂಜನ್ ಅವರು ಬ್ರಿಟಿಷ್ ಆಡಳಿತಾವಧಿ ವೇಳೆ ದೆಹಲಿ ವಿಧಾನಸಭೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಮಾಡಿದ ರೀತಿಯಲ್ಲೇ ಸಂಸತ್ತಿನ ಭದ್ರತಾ ವ್ಯವಸ್ಥೆ ಭೇದಿಸಲು ನಿರ್ಧರಿಸಿದ್ದ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 

ಮುಖಾಮುಖಿಯಾಗಿ ಭೇಟಿಯಾಗಲು ಹಣದ ಕೊರತೆಯಿಂದಾಗಿ ಆರೋಪಿಗಳು, ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕ ಸಾಧಿಸಿದ್ದರು. ಅಲ್ಲದೆ, ಇದೇ ಕಾರಣದಿಂದಾಗಿ ಈ ಕೃತ್ಯವೆಸಗುವ ಮುನ್ನ ಗುರುಗ್ರಾಮದಲ್ಲಿರುವ ವಿಕ್ಕಿ ಶರ್ಮಾ ಅವರ ನಿವಾಸದಲ್ಲಿ ವಾಸವಿದ್ದರು ಎಂದು ಪೊಲೀಸರು ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.