ಲೋಕಸಭೆ ಅಧಿವೇಶನ
ಪ್ರಾತಿನಿಧಿಕ ಚಿತ್ರ
ನವದೆಹಲಿ: ಸಂಸತ್‌ನ ಉಭಯ ಸದನಗಳನ್ನು ಗುರುವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ಒಂದು ತಿಂಗಳ ಕಾಲ ನಡೆದ ಮುಂಗಾರು ಅಧಿವೇಶನವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಅನಿರ್ದಿಷ್ಟಾವಧಿಗೆ ಮುಂದೂಡಿದರು. ರಾಜ್ಯಸಭೆಯ ಅಧಿವೇಶನವನ್ನು ಕೂಡ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
‘ಇಡೀ ಅಧಿವೇಶನದಲ್ಲಿ ಪದೇ ಪದೇ ಕಲಾಪಕ್ಕೆ ಅಡ್ಡಿಪಡಿಸಲು ಪ್ರಯತ್ನಗಳು ನಡೆದಿವೆ. ಒಂದು ತಿಂಗಳ ಕಾಲ ನಡೆದ ಅಧಿವೇಶನದಲ್ಲಿ ಹೆಚ್ಚಿನ ಚರ್ಚೆ ನಡೆಯಲು ಸಾಧ್ಯವಾಗದ ಕಾರಣ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಓಂ ಬಿರ್ಲಾ ಅವರು ವಿರೋಧ ಪಕ್ಷಗಳ ವಿರುದ್ಧ ಬೇಸರ ಹೊರಹಾಕಿದ್ದಾರೆ.
‘ಈ ಬಾರಿ ಅಧಿವೇಶನದಲ್ಲಿ 120 ಗಂಟೆಗಳ ಕಾಲ ಚರ್ಚೆ ನಡೆಸಬೇಕೆಂದು ನಾವೆಲ್ಲರೂ ಅಧಿವೇಶನದ ಆರಂಭದಲ್ಲಿಯೇ ನಿರ್ಧರಿಸಿದ್ದೆವು. ಸಂಸದೀಯ ವ್ಯವಹಾರ ಸಲಹಾ ಸಮಿತಿಯೂ ಇದಕ್ಕೆ ಒಪ್ಪಿಕೊಂಡಿತ್ತು. ಆದರೆ, ವಿಪಕ್ಷಗಳ ನಿರಂತರ ಪ್ರತಿಭಟನೆಯಿಂದಾಗಿ ಕೇವಲ 37 ಗಂಟೆಗಳ ಕಾಲ ಮಾತ್ರ ಚರ್ಚೆ ನಡೆಸಲಾಯಿತು’ ಎಂದು ಬಿರ್ಲಾ ವಿವರಿಸಿದ್ದಾರೆ.
ಈ ಬಾರಿ ಅಧಿವೇಶನದಲ್ಲಿ 419 ಪ್ರಶ್ನೆಗಳನ್ನು ಕಾರ್ಯಸೂಚಿಯಲ್ಲಿ ಸೇರಿಸಲಾಗಿತ್ತು, ಆದರೆ, ವಿಪಕ್ಷಗಳ ಅಡಚಣೆಯಿಂದಾಗಿ ಮೌಖಿಕ ಉತ್ತರಕ್ಕಾಗಿ ಕೇವಲ 55 ಪ್ರಶ್ನೆಗಳನ್ನು ಮಾತ್ರ ತೆಗೆದುಕೊಳ್ಳಲು ಸಾಧ್ಯವಾಯಿತು. ಸಂಸತ್ತಿನ ಸದಸ್ಯರ ನಡವಳಿಕೆ ಮತ್ತು ಕಾರ್ಯವೈಖರಿಯನ್ನು ಇಡೀ ದೇಶ ಗಮನಿಸುತ್ತದೆ ಎಂದು ಬಿರ್ಲಾ ಹೇಳಿದರು.
ಜುಲೈ 21ರಿಂದ ಮುಂಗಾರು ಅಧಿವೇಶನ ಆರಂಭವಾಗಿತ್ತು. ಆದರೆ, ಬಿಹಾರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಕೋರಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದ್ದರಿಂದ ಕಲಾಪಕ್ಕೆ ಅಡ್ಡಿಯಾಗಿತ್ತು.
ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆ, ಕಲಾಪಕ್ಕೆ ಅಡ್ಡಿ, ಸಭಾತ್ಯಾಗಗಳ ನಡುವೆಯೇ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ 12 ಹಾಗೂ ರಾಜ್ಯಸಭೆಯಲ್ಲಿ 14 ಮಸೂದೆಗಳನ್ನು ಮಂಡಿಸಿ ಅನುಮೋದನೆ ಪಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.