
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಆಡಳಿತಾರೂಢ ಎನ್‌ಡಿಎ ಕೆಲ ಮಸೂದೆಗಳನ್ನು ಮಂಡಿಸಲು ಸಿದ್ಧತೆ ನಡೆಸಿದ್ದರೆ, ವಿರೋಧ ಪಕ್ಷಗಳು ಮತದಾರರಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್), ದೆಹಲಿ ಕಾರು ಬಾಂಬ್ ಸ್ಫೋಟ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲು ಪಟ್ಟು ಹಿಡಿದಿವೆ.
ಡಿ. 1ರಿಂದ 19ರವರೆಗೆ ನಡೆಯಲಿರುವ ಅಧಿವೇಶನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಕಾವೇರಿದ ಚರ್ಚೆ ನಡೆಯುವ ಸಾಧ್ಯತೆಗಳಿವೆ. ವಿರೋಧ ಪಕ್ಷಗಳ ಆಗ್ರಹಕ್ಕೆ ಮಣಿಯದೆ, ನಿಯಮದ ಪ್ರಕಾರ ಚರ್ಚೆಗೆ ಅವಕಾಶ ಕಲ್ಪಿಸಲು ಸರ್ಕಾರ ಬಯಸಿದೆ.
ದೆಹಲಿ ಕಾರು ಸ್ಫೋಟದ ಘಟನೆಯನ್ನು ಮುಂದಿಟ್ಟುಕೊಂಡು ರಾಷ್ಟ್ರೀಯ ಭದ್ರತೆ ಕುರಿತು ಚರ್ಚಿಸಲು ವಿರೋಧ ಪಕ್ಷಗಳು ಉತ್ಸುಕವಾಗಿವೆ. ಅಲ್ಲದೆ, ಕಾರ್ಮಿಕ ಸಂಹಿತೆಗಳ ಜಾರಿ, ರಾಜ್ಯ ಶಾಸಕಾಂಗಗಳು ಅಂಗೀಕರಿಸಿದ ಮಸೂದೆಗಳ ವಿಷಯದಲ್ಲಿ ರಾಜ್ಯಪಾಲರ ಪಾತ್ರ, ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ಅನುದಾನ ಬಿಡುಗಡೆಯಲ್ಲಿನ ಬಾಕಿ, ಮತಕಳವು ಆರೋಪ ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ನಿರ್ಧರಿಸಿವೆ.
‘ವಿವಾದಿತ ಎಸ್‌ಐಆರ್ ಕುರಿತು ಚರ್ಚೆಗೆ ಅವಕಾಶ ನೀಡದಿದ್ದರೆ, ಕಲಾಪಕ್ಕೆ ಅಡ್ಡಿಪಡಿಸಬೇಕಾಗುತ್ತದೆ. ಅದರ ಹೊಣೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ’ ಎಂದು ಪ್ರತಿಪಕ್ಷಗಳು ಸರ್ಕಾರಕ್ಕೆ ಈಗಾಗಲೇ ಎಚ್ಚರಿಕೆ ನೀಡಿವೆ.
‘ವಂದೇ ಮಾತರಂ’ನ 150ನೇ ವರ್ಷಾಚರಣೆ ಪ್ರಯುಕ್ತ ಚರ್ಚೆ ನಡೆಸಲು ಸರ್ಕಾರ ಉತ್ಸುಕವಾಗಿದೆ. ಅದರ ಜತೆಗೆ 13 ಮಸೂದೆಗಳು ಮತ್ತು ಅನುದಾನಕ್ಕಾಗಿ ಹೆಚ್ಚುವರಿ ಬೇಡಿಕೆಗಳನ್ನು ಒಳಗೊಂಡಿರುವ ಪೂರಕ ಅಂದಾಜುಗಳನ್ನು ಮಂಡಿಸುವ ಉದ್ದೇಶವಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಭಾನುವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಸರ್ಕಾರ ತಿಳಿಸಿದೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷ, ಸಿಪಿಎಂ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಎಸ್‌ಐಆರ್ ಕುರಿತ ಚರ್ಚೆಗೆ ಸಭೆಯಲ್ಲಿ ಆಗ್ರಹಿಸಿದರು.
‘ರಾಷ್ಟ್ರೀಯ ಭದ್ರತೆ, ಚುನಾವಣಾ ಪ್ರಕ್ರಿಯೆಯ ಭದ್ರತೆ ಮತ್ತು ಆರ್ಥಿಕ ಭದ್ರತೆ ಸೇರಿದಂತೆ ಇತರ ವಿಷಯಗಳ ಕುರಿತು ಚರ್ಚೆ ಆಗಬೇಕು. ಮುಖ್ಯವಾಗಿ ಪ್ರಜಾಪ್ರಭುತ್ವದ ಭದ್ರತೆ ಕುರಿತು ಚರ್ಚೆಯಾಗಬೇಕು. ಚುನಾವಣಾ ಆಯೋಗ ಪಕ್ಷಪಾತಿಯಾಗಿ ವರ್ತಿಸುತ್ತಿದ್ದು, ಮತದಾರರ ಪಟ್ಟಿಯ ಶುದ್ಧತೆಯ ಬಗ್ಗೆ ಸಮಗ್ರ ಚರ್ಚೆ ನಡೆಯಬೇಕು. ವಿದೇಶಾಂಗ ನೀತಿ, ಬೆಳೆಗಳಿಗೆ ಸೂಕ್ತ ಬೆಲೆ, ರೈತರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೊಯ್ ಒತ್ತಾಯಿಸಿದರು.
‘ಆಡಳಿತ ಪಕ್ಷವು ಪ್ರಜಾಪ್ರಭುತ್ವವನ್ನು ಕೊನೆಗೊಳಿಸಲು, ಸಂಸತ್ತನ್ನು ಹಳಿತಪ್ಪಿಸುತ್ತಿದೆ. ಮತ್ತು ಸಂಸದೀಯ ಸಂಪ್ರದಾಯಗಳನ್ನು ಹೂತುಹಾಕಲು ಬಯಸಿದೆ’ ಎಂದು ಅವರು ಸುದ್ದಿಗಾರರಿಗೆ ಹೇಳಿದರು.
‘ಎಸ್‌ಐಆರ್ ಪ್ರಕ್ರಿಯೆಯಲ್ಲಿ ಹಲವು ತಪ್ಪುಗಳಾಗಿವೆ. ಇದರ ಚರ್ಚೆಯಿಂದ ಸರ್ಕಾರ ಹಿಂದೆ ಸರಿಯುವಂತಿಲ್ಲ. ಉಳಿದ ವಿಷಯಗಳಿಗಿಂತ ಮೊದಲಿಗೆ ಎಸ್‌ಐಆರ್ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಸಂಸತ್ತು ಸುಗಮವಾಗಿ ಕಾರ್ಯನಿರ್ವಹಿಸಲು ಬಿಡುವುದಿಲ್ಲ ಎಂಬುದಾಗಿ ಸಭೆಯಲ್ಲಿ ಎಚ್ಚರಿಸಿದ್ದೇವೆ’ ಎಂದು ಸಮಾಜವಾದಿ ಪಕ್ಷದ ನಾಯಕ ರಾಮಗೋಪಾಲ್ ಯಾದವ್ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
‘ಎಸ್‌ಐಆರ್, ದೆಹಲಿ ಕಾರ್ ಬಾಂಬ್ ಸ್ಫೋಟ, ದೆಹಲಿ ವಾಯು ಮಾಲಿನ್ಯ ಕುರಿತು ಚರ್ಚೆಗೆ ಅವಕಾಶ ನೀಡಬೇಕು’ ಎಂದು ಸಿಪಿಐ ನಾಯಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಎರಡು ಗಂಟೆಗಳವರೆಗೆ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ 36 ಪಕ್ಷಗಳ 50 ನಾಯಕರು ಭಾಗವಹಿಸಿದ್ದರು. ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜೆಪಿ.ನಡ್ಡಾ, ಸಚಿವರಾದ ಕಿರಣ್ ರಿಜಿಜು, ಅರ್ಜುನ್ ರಾಮ್ ಮೇಘವಾಲ್, ಎಲ್. ಮುರುಗನ್ ಸಭೆಯಲ್ಲಿದ್ದರು.
15 ದಿನಗಳು ನಡೆಯುವ ಈ ಅಧಿವೇಶನವು ಸಂಸತ್ತಿನ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಅವಧಿಯದ್ದಾಗಲಿದೆ. ಮೋದಿ ಸರ್ಕಾರ 13 ಮಸೂದೆಗಳ ಅಂಗೀಕಾರಕ್ಕೆ ಪಟ್ಟಿ ಮಾಡಿದೆ. ಈ ಪೈಕಿ 10 ಮಸೂದೆಗಳನ್ನು ಸಂಬಂಧಪಟ್ಟ ಸ್ಥಾಯಿ ಸಮಿತಿಗಳು ಪರಿಶೀಲಿಸಿಲ್ಲಜೈರಾಮ್ ರಮೇಶ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ)
ಮಂಡನೆ ಸಾಧ್ಯತೆಯಿರುವ ಮಸೂದೆಗಳು
ಜನ ವಿಶ್ವಾಸ (ನಿಬಂಧನೆಗಳು ತಿದ್ದುಪಡಿ) ಮಸೂದೆ– 2025
ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ–2025
ಮಣಿಪುರ ಸರಕು ಮತ್ತು ಸೇವಾ ತೆರಿಗೆ (ಎರಡನೇ ತಿದ್ದುಪಡಿ) ಮಸೂದೆ– 2025 (ಸುಗ್ರೀವಾಜ್ಞೆ ಬದಲಿಸಲು)
ರದ್ದುಗೊಳಿಸುವ ಮತ್ತು ತಿದ್ದುಪಡಿ ಮಾಡುವ ಮಸೂದೆ– 2025
ರಾಷ್ಟ್ರೀಯ ಹೆದ್ದಾರಿಗಳ (ತಿದ್ದುಪಡಿ) ಮಸೂದೆ– 2025
ಪರಮಾಣು ಶಕ್ತಿ ಮಸೂದೆ–2025
ಕಾರ್ಪೊರೇಟ್ ಕಾನೂನುಗಳ (ತಿದ್ದುಪಡಿ) ಮಸೂದೆ– 2025
ದಿ ಸೆಕ್ಯುರಿಟೀಸ್ ಮಾರ್ಕೆಟ್ಸ್ ಕೋಡ್ ಬಿಲ್– 2025
ವಿಮಾ ಕಾನೂನುಗಳ (ತಿದ್ದುಪಡಿ) ಮಸೂದೆ– 2025
ಮಧ್ಯಸ್ಥಿಕೆ ಮತ್ತು ಸಂಧಾನ (ತಿದ್ದುಪಡಿ) ಮಸೂದೆ– 2025
ಭಾರತದ ಉನ್ನತ ಶಿಕ್ಷಣ ಆಯೋಗದ ಮಸೂದೆ– 2025
ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ–2025
ಆರೋಗ್ಯ ಭದ್ರತೆ– ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ– 2025
ಅಧಿವೇಶನದ ಮೊದಲ ದಿನದ ಕಲಾಪದಲ್ಲೇ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಸಂಕ್ಷಿಪ್ತ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಪ್ರತಿಪಕ್ಷದ ನಾಯಕರು ರಾಜ್ಯಸಭೆಯ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಭಾನುವಾರ ಆಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉಪರಾಷ್ಟ್ರಪತಿಯೂ ಆಗಿರುವ ರಾಜ್ಯಸಭೆ ಸಭಾಪತಿ ಸಿ.ಪಿ.ರಾಧಾಕೃಷ್ಣನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ಈ ವಿಷಯ ಪ್ರಸ್ತಾಪಿಸಿದರು. ‘ಕಲಾಪ ಸುಗುಮವಾಗಿ ನಡೆಯಬೇಕು ಎಂದು ನಾವೂ ಬಯಸುತ್ತೇವೆ. ಅದಕ್ಕೆ ಸಹಕರಿಸುತ್ತೇವೆ. ಆದರೆ ಎಸ್‌ಐಆರ್ ಕುರಿತು ತುರ್ತು ಚರ್ಚಿಸಬೇಕಾದ ಅಗತ್ಯವಿದ್ದು ಮೊದಲ ದಿನವೇ ಸಂಕ್ಷಿಪ್ತವಾಗಿ ಚರ್ಚಿಸಲು ಅನುವು ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.