ಲೋಕಸಭೆ ಅಧಿವೇಶನ
ಪ್ರಾತಿನಿಧಿಕ ಚಿತ್ರ
ನವದೆಹಲಿ: ಬಿಹಾರದಲ್ಲಿ ನಡೆದ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ಗೆ(ಎಸ್‌ಐಆರ್) ಆಗ್ರಹಿಸಿ ವಿಪಕ್ಷಗಳ ಪ್ರತಿಭಟನೆ ನಿರ್ಲಕ್ಷಿಸಿ, ಕೇಂದ್ರ ಸರ್ಕಾರ ತನ್ನ ಶಾಸನಾತ್ಮಕ ಕಾರ್ಯಸೂಚಿಯೊಂದಿಗೆ ಸಂಸತ್ ಅಧಿವೇಶನ ಮುನ್ನಡೆಸುವ ಸಾಧ್ಯತೆ ಇದೆ.
ಸಂಸತ್‌ನ ಮುಂಗಾರು ಅಧಿವೇಶನ ಸೋಮವಾರ ಮತ್ತೆ ಆರಂಭವಾಗಲಿದ್ದು, ಹಲವಾರು ಮಹತ್ವದ ಮಸೂದೆಗಳ ಜೊತೆಗೆ, ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ವಿಸ್ತರಿಸುವ ಕುರಿತು ನಿರ್ಣಯ ಕುರಿತು ಚರ್ಚೆ ನಡೆಸುವುದು ಪಟ್ಟಿಯಲ್ಲಿದೆ.
ಮಣಿಪುರದಲ್ಲಿ ಜಾರಿಯಲ್ಲಿರುವ ರಾಷ್ಟ್ರಪತಿ ಆಡಳಿತ ಆಗಸ್ಟ್ 12ಕ್ಕೆ ಕೊನೆಗೊಳ್ಳಲಿದೆ. ಆಗಸ್ಟ್ 13ರಿಂದ ಅನ್ವಯವಾಗುವಂತೆ ರಾಷ್ಟ್ರಪತಿ ಆಡಳಿತ ವಿಸ್ತರಣೆ ಮಾಡುವ ಕುರಿತ ನಿರ್ಣಯವನ್ನು ಕಳೆದ ವಾರ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಕುರಿತು ಚರ್ಚೆ ನಡೆಯಲಿದೆ.
ಫೆಬ್ರುವರಿ 13ರಂದು ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಲಾಗಿತ್ತು.
ಕಳೆದ ಗುರುವಾರ ಮತ್ತು ಶುಕ್ರವಾರ ಈ ನಿರ್ಣಯ ಕುರಿತು ಚರ್ಚೆ ನಡೆಸಲು ಸರ್ಕಾರ ಮುಂದಾಗಿತ್ತು. ಬಿಹಾರದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವಿಚಾರ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಪ್ರತಿಭಟಿಸಿದ ಪರಿಣಾಮ, ಯಾವುದೇ ಚರ್ಚೆ ನಡೆಯದೇ ಸದನವನ್ನು ಮುಂದೂಡಲಾಗಿತ್ತು.
‘ಎಸ್‌ಐಆರ್ ವಿಚಾರ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಪ್ರತಿಭಟನೆ ಮುಂದುವರಿಸಿದಲ್ಲಿ, ಅದನ್ನು ನಿರ್ಲಕ್ಷಿಸಿ, ಮಹತ್ವದ ಮಸೂದೆಗಳನ್ನು ಮಂಡಿಸಲಾಗುವುದು’ ಎಂದು ಆಡಳಿತಾರೂಢ ಪಕ್ಷದ ಸಂಸದರೊಬ್ಬರು ಹೇಳಿದ್ದಾರೆ.
ಎರಡು ಕ್ರೀಡಾ ಮಸೂದೆ
ಪಟ್ಟಿಯಲ್ಲಿ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ಎರಡು ಮಸೂದೆಗಳನ್ನು ಸೋಮವಾರ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ರಾಷ್ಟ್ರೀಯ ಕ್ರೀಡೆಗಳ ನಿಯಂತ್ರಣ ಮಸೂದೆ ಹಾಗೂ ರಾಷ್ಟ್ರೀಯ ಉದ್ದೀಪನ ಮದ್ದು ನಿಷೇಧ ತಿದ್ದುಪಡಿ ಮಸೂದೆಗಳನ್ನು ಸೋಮವಾರ ಮಂಡಿಸಲಾಗುತ್ತದೆ. ಕ್ರೀಡಾ ಸಂಸ್ಥೆಗಳ ಕಾರ್ಯವೈಖರಿಯಲ್ಲಿ ಹೆಚ್ಚು ಪಾರದರ್ಶಕತೆ ತರುವ ಉದ್ದೇಶದ ಅವಕಾಶಗಳನ್ನು ರಾಷ್ಟ್ರೀಯ ಕ್ರೀಡೆಗಳ ನಿಯಂತ್ರಣ ಮಸೂದೆ ಒಳಗೊಂಡಿದೆ. ಗೋವಾ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯ ಮರುಹೊಂದಾಣಿಕೆ ಮಸೂದೆ ಮರ್ಚಂಟ್ ಶಿಪ್ಪಿಂಗ್ ಮಸೂದೆಗಳ ಕುರಿತು ಲೋಕಸಭೆಯಲ್ಲಿ ಮಂಗಳವಾರ ಚರ್ಚೆ ನಡೆಸಲಾಗುತ್ತದೆ. ರಾಜ್ಯಸಭೆಯಲ್ಲಿ ‘ಕೋಸ್ಟಲ್ ಶಿಪ್ಪಿಂಗ್ ಮಸೂದೆ’ ಚರ್ಚೆಗೆ ಬರುವ ಸಾಧ್ಯತೆ ಇದೆ.
ಚುನಾವಣಾ ಆಯೋಗ ತಟಸ್ಥವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದೇ ಪ್ರಶ್ನಾರ್ಹ. ಹೀಗಾಗಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಚರ್ಚೆ ನಡೆಯಬೇಕು ಎಂಬುದು ವಿಪಕ್ಷಗಳ ಬೇಡಿಕೆ–ಗೌರವ್ ಗೊಗೊಯ್, ಹಿರಿಯ ಕಾಂಗ್ರೆಸ್ ನಾಯಕ
ಚುನಾವಣಾ ಆಯೋಗವು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಆಯೋಗದ ಇಂತಹ ನಡೆ ವಿರುದ್ಧ ರಾಜಕೀಯ ಹಾಗೂ ಕಾನೂನು ಹೋರಾಟ ಅಗತ್ಯ–ಪಿ.ಚಿದಂಬರಂ, ಹಿರಿಯ ಕಾಂಗ್ರೆಸ್ ನಾಯಕ
ಬಿಹಾರದಲ್ಲಿ ನಡೆಯುತ್ತಿರುವ ‘ಎಸ್‌ಐಆರ್’ ಕುರಿತು ಚರ್ಚೆ ನಡೆಸಲು ಬಿಜೆಪಿಗೆ ಹೆದರಿಕೆ. ಚುನಾವಣಾ ಆಯೋಗ ಕೈಗೊಂಡಿರುವ ಈ ಪ್ರಕ್ರಿಯೆ ‘ಅಗೋಚರ ಚುನಾವಣಾ ಅಕ್ರಮ’ವೇ ಆಗಿದೆ–ಡೆರೆಕ್ ಒಬ್ರಯಾನ್, ಟಿಎಂಸಿ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.