ಸಂಸತ್ ಭವನದ ಹೊರಗೆ 'ಇಂಡಿಯಾ' ಮೈತ್ರಿಕೂಟದ ಸಂಸದರ ಪ್ರತಿಭಟನೆ
ಕೃಪೆ: X / @cpimspeak
ನವದೆಹಲಿ: ‘ಕಾರ್ಮಿಕ ವಿರೋಧಿ’ ಸಂಹಿತೆ ವಿರೋಧಿಸಿ ವಿರೋಧ ಪಕ್ಷಗಳು ಸಂಸತ್ತಿನ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದವು. ಆದರೆ ಕಲಾಪಕ್ಕೆ ಯಾವುದೇ ಅಡ್ಡಿ ಮಾಡಲಿಲ್ಲ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಟಿ.ಆರ್.ಬಾಲು, ಕನಿಮೊಳಿ, ಕೆ.ರಾಧಾಕೃಷ್ಣನ್ ಮತ್ತು ಜಾನ್ ಬ್ರಿಟ್ಟಾಸ್, ಪಿ.ಸಂತೋಷ್ ಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ‘ಕಾರ್ಪೊರೇಟ್ ಜಂಗಲ್ ರಾಜ್ ಬೇಡ, ಕಾರ್ಮಿಕರಿಗೆ ನ್ಯಾಯ ಬೇಕು’ ಎಂದು ಬರೆದಿದ್ದ ಬ್ಯಾನರ್ ಹಿಡಿದು ಘೋಷಣೆಗಳನ್ನು ಕೂಗಿದರು.
ಖರ್ಗೆ ಅವರ ಕಚೇರಿಯಲ್ಲಿ ನಡೆದ ವಿರೋಧ ಪಕ್ಷಗಳ ಸಂಸದರ ಸಭೆಯಲ್ಲಿ ಟಿಎಂಸಿ ಸದಸ್ಯರು ಭಾಗಿಯಾಗಿರಲಿಲ್ಲ. ಆದರೆ ಟಿಎಂಸಿ ಸಂಸದೆ ಡೋಲಾ ಸೇನ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ಮಧ್ಯೆ ಪಶ್ಚಿಮ ಬಂಗಾಳಕ್ಕೆ ಬಾಕಿ ಇರುವ ನರೇಗಾ ಅನುದಾನವನ್ನು ನೀಡುವಂತೆ ಆಗ್ರಹಿಸಿ ಟಿಎಂಸಿ ಸದಸ್ಯರು ಗಾಂಧಿ ಪ್ರತಿಮೆಯಿಂದ ಮಕರ ದ್ವಾರದವರೆಗೆ ಮೆರವಣಿಗೆ ನಡೆಸಿದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಶೀಲನೆ (ಎಸ್‌ಐಆರ್) ಕುರಿತ ಚರ್ಚೆಗೆ ದಿನ ನಿಗದಿ ಮಾಡಿದ ಬೆನ್ನಲ್ಲೇ, ಕಲಾಪದ ಕಾರ್ಯತಂತ್ರದ ಕುರಿತು ಕಾಂಗ್ರೆಸ್, ಡಿಎಂಕೆ, ಆರ್‌ಜೆಡಿ, ಎಸ್‌ಪಿ, ಜೆಎಂಎಂ, ಸಿಪಿಎಂ, ಸಿಪಿಐ, ಮುಸ್ಲಿಂ ಲೀಗ್, ಎನ್‌ಸಿಪಿ–ಎಸ್‌ಪಿ ಮತ್ತು ಶಿವಸೇನೆ (ಉದ್ಧವ್ ಬಣ) ಸಂಸದರು ಚರ್ಚಿಸಿದರು.
ಬಳಿಕ ಖರ್ಗೆ ಅವರು ‘ಎಕ್ಸ್’ನಲ್ಲಿ, ‘ಮೋದಿ ಸರ್ಕಾರವು ಕಾರ್ಮಿಕ ವಿರೋಧಿ, ಕೋಟ್ಯಧಿಪತಿಗಳ ಪರವಾಗಿದೆ. ನೂತನ ಕಾರ್ಮಿಕ ಸಂಹಿತೆ ಬಳಿಕ ಕಂಪನಿಗಳು ಕಡಿಮೆ ಅವಧಿಯ ಗುತ್ತಿಗೆಗೆ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಅಪಾಯವಿದೆ’ ಎಂದು ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರು, ‘ಈ ಹಿಂದೆ ಕಾರ್ಮಿಕರಿಗೆ ನೀಡಿದ್ದ ಸುರಕ್ಷತೆಯನ್ನು ಹಿಂಪಡೆಯಲಾಗಿದೆ. ಅವರ ಶೋಷಣೆಗೆ ಹೊಸ ಮಾರ್ಗಗಳನ್ನು ತೆರೆದಂತಾಗಿದೆ. ಈ ಕಾನೂನುಗಳ ಮೂಲಕ ಪ್ರಧಾನಿ ಮೋದಿ ಅವರು ತಾವು ಕೋಟ್ಯಧಿಪತಿಗಳ ಪರ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ದೇಶವು ಈ ಕಾನೂನುಗಳನ್ನು ಸ್ವೀಕರಿಸುವುದಿಲ್ಲ’ ಎಂದು
ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.