ADVERTISEMENT

ಎ.ಐ ಶೃಂಗಸಭೆ ವೇಳೆ ‘ಕೈ’ ಕಾರ್ಯಕರ್ತರ ಪ್ರತಿಭಟನೆಗೆ ಖಂಡನೆ: ನಿರ್ಣಯ ಅಂಗೀಕಾರ

ಸಂಸದೀಯ ಸಮಿತಿ ನಡೆಗೆ ವಿಪಕ್ಷಗಳ ಸಂಸದರ ವಿರೋಧ

ಪಿಟಿಐ
Published 24 ಫೆಬ್ರುವರಿ 2026, 14:18 IST
Last Updated 24 ಫೆಬ್ರುವರಿ 2026, 14:18 IST
ನಿಶಿಕಾಂತ್‌ ದುಬೆ
ನಿಶಿಕಾಂತ್‌ ದುಬೆ   

ನವದೆಹಲಿ: ‘ದೆಹಲಿಯಲ್ಲಿ ನಡೆದ ಎ.ಐ ಶೃಂಗಸಭೆ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ದುರದೃಷ್ಟಕರ’ ಎಂಬುದಾಗಿ ಖಂಡಿಸುವ ನಿರ್ಣಯವನ್ನು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೇತೃತ್ವದ ಸಂಸದೀಯ ಸಮಿತಿ ಮಂಗಳವಾರ ಅಂಗೀಕರಿಸಿತು.

ಈ ನಿರ್ಣಯಕ್ಕೆ ‘ಇಂಡಿಯಾ’ ಒಕ್ಕೂಟದ ಸಂಸದರಿಂದ ಭಾರಿ ವಿರೋಧ ವ್ಯಕ್ತವಾಯಿತು. ವಿಪಕ್ಷಗಳ ಸಂಸದರ ಪ್ರತಿಭಟನೆಯ ನಡುವೆಯೇ, ದುಬೆ ನೇತೃತ್ವದ ಸಂವಹನ, ಮಾಹಿತಿ ಮತ್ತು ತಂತ್ರಜ್ಞಾನ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಈ ನಿರ್ಣಯವನ್ನು ಅಂಗೀಕರಿಸಿತು.

ಸಮಿತಿಯ ಸದಸ್ಯ ಬಲ 31 ಇದ್ದು, ಈ ಪೈಕಿ 16 ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

‘ಸಮಿತಿ ಸಭೆ ಆರಂಭಗೊಂಡಾಗ, ಬಿಜೆಪಿ ಸಂಸದ ಅಮರಪಾಲ್ ಮೌರ್ಯ ಅವರು ಈ ಕುರಿತ ಗೊತ್ತುವಳಿಯನ್ನು ಮಂಡಿಸಿದರು. ವಿರೋಧ ಪಕ್ಷಗಳಾದ ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಕ್ಷ ಹಾಗೂ ಶಿವಸೇನಾ(ಯುಬಿಟಿ) ಸಂಸದರು ಈ ಗೊತ್ತುವಳಿಗೆ ಬೆಂಬಲ ನೀಡಲಿಲ್ಲ’ ಎಂದು ವಿರೋಧ ಪಕ್ಷಗಳ ಮೂಲಗಳು ಹೇಳಿವೆ.

‘ಎ.ಐ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯನ್ನು ಪ್ರಸ್ತಾಪ ಮಾಡುವುದಾದಲ್ಲಿ, ಚೀನಾ ನಿರ್ಮಿತ ರೊಬೊನಾಯಿಯನ್ನು ಪ್ರದರ್ಶಿಸಿದ ಗಲ್ಗೋತಿಯಾ ವಿಶ್ವವಿದ್ಯಾಲಯದ ವಿಚಾರವನ್ನು ಕೂಡ ಉಲ್ಲೇಖಿಸಬೇಕು ಎಂಬುದಾಗಿ ವಿಪಕ್ಷಗಳ ಸಂಸದರು ಸಭೆಯಲ್ಲಿ ಒತ್ತಾಯಿಸಿದರು’ ಎಂದೂ ಮೂಲಗಳು ಹೇಳಿವೆ.

‘ನಾವು ಎ.ಐ ಶೃಂಗಸಭೆ ಆಯೋಜಿಸಿದ್ದನ್ನು ಮನಃಪೂರ್ವಕವಾಗಿ ಸ್ವಾಗತಿಸುತ್ತೇವೆ. ಆದರೆ, ಈ ಕುರಿತ ಗೊತ್ತುವಳಿಯನ್ನು ಕೇವಲ ಪ್ರತಿಭಟನೆಯನ್ನು ಉಲ್ಲೇಖಿಸುವುದಕ್ಕೆ ಸೀಮಿತಗೊಳಿಸುವುದನ್ನು ವಿರೋಧಿಸುತ್ತೇವೆ’ ಎಂಬುದಾಗಿ ವಿರೋಧ ಪಕ್ಷಗಳ ಸಂಸದರು ಸಭೆಯಲ್ಲಿ ಹೇಳಿದರು.

‘ಇಂತಹ ಶೃಂಗಸಭೆಯ ಮಹತ್ವವನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ. ಶೃಂಗಸಭೆಯಲ್ಲಿ ವ್ಯಕ್ತವಾದ ಭಿನ್ನಾಭಿಪ್ರಾಯಗಳು ಅಥವಾ ಪ್ರತಿಭಟನೆಗಳನ್ನು ಪ್ರಸ್ತಾಪಿಸಿ ನಿರ್ಣಯ ಅಂಗೀಕರಿಸುವುದಕ್ಕೆ ಸಂಸದೀಯ ಸಮಿತಿ ಸಭೆ ಸೂಕ್ತ ವೇದಿಕೆಯಾಗುವುದಿಲ್ಲ’ ಎಂದೂ ಹೇಳಿದ್ದಾಗಿ ವಿಪಕ್ಷದ ಹಿರಿಯ ಸಂಸದರೊಬ್ಬರು ತಿಳಿಸಿದ್ದಾರೆ.

‘ಎ.ಐ ಶೃಂಗಸಭೆಯು ಭಾರಿ ಯಶಸ್ವಿಯಾಗಿದೆ’ ಎಂಬ ನಿರ್ಣಯವನ್ನು ಕೂಡ ಅಂಗೀಕರಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ನಿಶಿಕಾಂತ್‌ ದುಬೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.