ಸಾಂದರ್ಭಿಕ ಚಿತ್ರ
ನವದೆಹಲಿ: ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ (ಒಬಿಸಿ) ಅಧಿಕಾರಿಗಳಿಗೆ ಕೇಂದ್ರದ ವಿವಿಧ ಸಚಿವಾಲಯ, ಇಲಾಖೆಗಳ ಉನ್ನತ ಹುದ್ದೆಗಳಲ್ಲಿ ಪ್ರಾತಿನಿಧ್ಯ ಸಿಗುವಂತೆ ‘ಕೇಂದ್ರ ಸಿಬ್ಬಂದಿ ವ್ಯವಸ್ಥೆ’ (ಸಿಎಸ್‌ಎಸ್) ಪುನರ್ ರಚಿಸಬೇಕು ಎಂದು ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ.
ಬಿಜೆಪಿ ಸಂಸದ ಗಣೇಶ್ ಸಿಂಗ್ ನೇತೃತ್ವದ, ಹಿಂದುಳಿದ ವರ್ಗಗಳ ಕಲ್ಯಾಣ ಕುರಿತ ಸಮಿತಿಯ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ‘ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಂಕಿ–ಅಂಶಗಳ ಪ್ರಕಾರ, ಸದ್ಯ ಈ ವರ್ಗಗಳ ಅಧಿಕಾರಿಗಳಿಗೆ ಕಡಿಮೆ ಪ್ರಾತಿನಿಧ್ಯವಿದೆ’ ಎಂದು ಸಮಿತಿ ಹೇಳಿದೆ.
ಒಬಿಸಿ ವರ್ಗದವರಿಗೆ ಸೂಕ್ತ ಪ್ರಾತಿನಿಧ್ಯ ಸಿಗದಿದ್ದಲ್ಲಿ ಈ ವರ್ಗದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಒಟ್ಟು ಹಿತಾಸಕ್ತಿಯ ರಕ್ಷಣೆ ಪ್ರಾಯೋಗಿಕವಾಗಿ ಕಷ್ಟ ಸಾಧ್ಯ ಎಂದೂ ಸಮಿತಿ ಅಭಿಪ್ರಾಯಪಟ್ಟಿದೆ.
ವರದಿ ಸಿದ್ದಪಡಿಸುವಾಗ ‘ಲ್ಯಾಟರಲ್ ಎಂಟ್ರಿ’ಯಡಿ ನೇಮಕವಾಗುವ ಹುದ್ದೆಗಳಿಗೆ ಮೀಸಲಾತಿ ನೀತಿ ಅನ್ವಯಿಸದಿರುವುದಕ್ಕೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಸಮಿತಿಯು ತರಾಟೆ ತೆಗೆದುಕೊಂಡಿತ್ತು.
ಆದರೆ, ‘ಹುದ್ದೆಯು ಒಂದೇ ಇದ್ದಾಗ ಮೀಸಲಾತಿ ನಿಯಮವು ಅನ್ವಯಿಸದು’ ಎಂದು 1998ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಉಲ್ಲೇಖಿಸಿ ಇಲಾಖೆಯು ಇದಕ್ಕೆ ಪ್ರತಿಕ್ರಿಯೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.