ADVERTISEMENT

ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆಗೆ ರಾಜ್ಯಗಳು ವಿಫಲ: ಸಂಸದೀಯ ಸಮಿತಿ ಕಳವಳ

ಪರಿಣಾಮಕಾರಿ ಜಾರಿಗೆ ರಾಜ್ಯಗಳ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ ಅಗತ್ಯ * ಸಂಸದೀಯ ಸಮಿತಿ ವರದಿ ಮಂಡನೆ

ಪಿಟಿಐ
Published 18 ಡಿಸೆಂಬರ್ 2024, 15:35 IST
Last Updated 18 ಡಿಸೆಂಬರ್ 2024, 15:35 IST
ಸಂಸತ್‌ ಭವನ
ಸಂಸತ್‌ ಭವನ   

ನವದೆಹಲಿ: ಪರಿಶಿಷ್ಟ ಜಾತಿಗೆ (ಎಸ್‌ಸಿ) ಸೇರಿದವರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಅಗತ್ಯ ಕಾರ್ಯವಿಧಾನಗಳನ್ನು ಸ್ಥಾಪಿಸಲು ಹಲವು ರಾಜ್ಯಗಳು ವಿಫಲವಾಗಿವೆ ಎಂದು ಸಂಸದೀಯ ಸಮಿತಿ ಕಳವಳ ವ್ಯಕ್ತಪಡಿಸಿದೆ.

1955ರ ನಾಗರಿಕ ಹಕ್ಕುಗಳ ಸಂರಕ್ಷಣೆ ಕಾಯ್ದೆ, 1989ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಪರಿಣಾಮಕಾರಿಯಾಗಿ ಜಾರಿ ಮತ್ತು ಅವನ್ನು ಬಲಪಡಿಸುವ ಕಾರ್ಯದಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.

ಸಮಿತಿಯು ಈ ವರದಿಯನ್ನು ಬುಧವಾರ ಲೋಕಸಭೆಯಲ್ಲಿ ಮಂಡಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ರಾಜ್ಯಗಳು ಲಭ್ಯವಿರುವ ಹಣವನ್ನು ಬಳಸಿಕೊಳ್ಳುತ್ತಿಲ್ಲ, ಅಲ್ಲದೆ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನೂ ತೆಗೆದುಕೊಳ್ಳುತ್ತಿಲ್ಲ ಎಂದು ವರದಿ ಹೇಳಿದೆ.

ADVERTISEMENT

ಪರಿಶಿಷ್ಟ ಜಾತಿಯವರ ವಿರುದ್ಧದ ದೌರ್ಜನ್ಯಗಳನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಸಂಪನ್ಮೂಲಗಳ ಬೆಂಬಲದೊಂದಿಗೆ ರಾಜ್ಯ ಸರ್ಕಾರಗಳು ಪ್ರಾಮಾಣಿಕ ಮತ್ತು ಸಂಘಟಿt ಪ್ರಯತ್ನಗಳನ್ನು ಮಾಡಬೇಕು ಎಂದು ಸಮಿತಿ ಹೇಳಿದೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿನ ಸವಾಲುಗಳ ಕುರಿತು ಸಮಿತಿಯು ವರದಿಯಲ್ಲಿ ಉಲ್ಲೇಖ ಮಾಡಿದೆ. ಅಪೂರ್ಣ ದಾಖಲಾತಿ, ಆಧಾರ್‌ ಜೋಡಣೆಯಲ್ಲಿ ದೋಷಗಳು, ಪೋಸ್ಟ್‌ ಮೆಟ್ರಿಕ್‌ ವಿದ್ಯಾರ್ಥಿ ವೇತನ ಯೋಜನೆಗಳಿಗೆ ಹಣ ಬಿಡುಗಡೆಯಲ್ಲಿ ವಿಳಂಬ ಸೇರಿದಂತೆ ಹಲವು ಸವಾಲುಗಳ ಬಗ್ಗೆ ಸಮಿತಿ ಪ್ರಸ್ತಾಪಿಸಿದೆ.

ಯೋಜನೆಗಳ ಸಮರ್ಪಕ ಜಾರಿಗೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ಅಗತ್ಯವಿದೆ ಎಂದು ಹೇಳಿರುವ ಸಮಿತಿಯು ಮಧ್ಯ ಪ್ರದೇಶ, ರಾಜಸ್ಥಾನ, ಬಿಹಾರ, ಒಡಿಶಾದಂತಹ ರಾಜ್ಯಗಳು ನಿಧಿ ಬಳಕೆಯಲ್ಲಿ ಸತತ ಹಿಂದುಳಿದಿವೆ ಎಂದು ತಿಳಿಸಿದೆ. ಈ ಸಂಬಂಧ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ರಾಜ್ಯಗಳ ಮೇಲೆ ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸಬೇಕು ಎಂದು ಸಮಿತಿ ಸಲಹೆ ನೀಡಿದೆ. 

ಕೇಂದ್ರ ಅನುದಾನಿತ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಲು ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಸಂಪನ್ಮೂಲವನ್ನು ಸಕ್ರಿಯವಾಗಿ ಒದಗಿಸಬೇಕು. ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಪೂರಕವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಮಿತಿ ಹೇಳಿದೆ.

ಅನುದಾನದ ಕೊರತೆ

ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪುಗಳ ಯೋಜನೆಯಡಿ ಪ್ರಮುಖ ರಾಜ್ಯಗಳಿಗೆ 2022–23ರಲ್ಲಿ ವಿತರಿಸಲಾಗಿದ್ದ ಅನುದಾನದಲ್ಲಿನ ಕೊರತೆಯ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿ ಕಳವಳ ವ್ಯಕ್ತಪಡಿಸಿದೆ. ಬುಡಕಟ್ಟು ಜನರು ಹೆಚ್ಚಿರುವ ಜಾರ್ಖಂಡ್ ಮಧ್ಯ ಪ್ರದೇಶ ಮಹಾರಾಷ್ಟ್ರ ಕೇರಳ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಂತಹ ರಾಜ್ಯಗಳಿಗೆ ಯಾವುದೇ ಹಣ ಹಂಚಿಕೆ ಮಾಡಿಲ್ಲ. ಸಂಪನ್ಮೂಲ ಕೊರತೆಯಿರುವ ಯೋಜಿತ ಅಭಿವೃದ್ಧಿ ಕಾರ್ಯಗಳನ್ನು ಜಾರಿ ಮಾಡುವುದಾದರೂ ಹೇಗೆ ಎಂದು ಸಮಿತಿ ಪ್ರಶ್ನಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.