ADVERTISEMENT

Waqf Bill | ವಕ್ಫ್ ಮಸೂದೆಗೆ ಸಂಸತ್ತಿನ ಅನುಮೋದನೆ ಐತಿಹಾಸಿಕ ಕ್ಷಣ: ಪಿಎಂ ಮೋದಿ

ಪಿಟಿಐ
Published 4 ಏಪ್ರಿಲ್ 2025, 7:26 IST
Last Updated 4 ಏಪ್ರಿಲ್ 2025, 7:26 IST
   

ನವದೆಹಲಿ: ಸಂಸತ್ತಿನ ಉಭಯ ಸದನಗಳು ವಕ್ಫ್ (ತಿದ್ದುಪಡಿ) ಮಸೂದೆ 2025 ಅನ್ನು ಅಂಗೀಕರಿಸಿರುವುದು ದೇಶಕ್ಕೆ ಐತಿಹಾಸಿಕ ಕ್ಷಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬಣ್ಣಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಇದು ಸಾಮಾಜಿಕ-ಆರ್ಥಿಕ ನ್ಯಾಯ, ಪಾರದರ್ಶಕತೆ ಮತ್ತು ಅಂತರ್ಗತ ಬೆಳವಣಿಗೆಗೆ ನಮ್ಮ ಸಾಮೂಹಿಕ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ವಿಶೇಷವಾಗಿ ದೀರ್ಘಕಾಲದಿಂದ ಅವಕಾಶ ವಂಚಿತರಾದವರಿಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ದಶಕಗಳಿಂದ ವಕ್ಫ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆ ಇತ್ತು. ಈ ಕಾರಣದಿಂದಾಗಿ, ಮುಖ್ಯವಾಗಿ ಮುಸ್ಲಿಂ ಮಹಿಳೆಯರು, ಬಡ ಮುಸ್ಲಿಮರ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತಿತ್ತು. ಈಗ ಸಂಸತ್ತು ಅಂಗೀಕರಿಸಿರುವ ಮಸೂದೆ ಪಾರದರ್ಶಕತೆ ಹೆಚ್ಚಿಸುವುದಲ್ಲದೆ ಜನರ ಹಕ್ಕುಗಳ ರಕ್ಷಣೆಗೆ ಸಹಕಾರಿಯಾಗಲಿದೆ.

ADVERTISEMENT

ಇದರೊಂದಿಗೆ ನಾವು ಇಂದಿನ ಕಾಲಕ್ಕೆ ಹೊಂದಿಕೆಯಾಗುವ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಯುಗವನ್ನು ಪ್ರವೇಶಿಸುತ್ತೇವೆ. ದೇಶದ ಪ್ರತಿಯೊಬ್ಬ ಪ್ರಜೆಯ ಘನತೆಗೆ ಆದ್ಯತೆ ಸಿಗುವಂತೆ ಮಾಡಲು ನಾವು ಸಂಕಲ್ಪ ಮಾಡಿದ್ದೇವೆ. ಹೆಚ್ಚು ಬಲಿಷ್ಠ, ಅಂತರ್ಗತ ಮತ್ತು ಸಂವೇದನಾಶೀಲ ಭಾರತವನ್ನು ನಿರ್ಮಿಸುವಲ್ಲಿ ಈ ಮಸೂದೆಯು ಬಹಳ ಮುಖ್ಯವಾಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.