
ಪುಣೆ: ಬೃಹನ್ ಮುಂಬೈ ಮಹಾನಗರಪಾಲಿಕೆ(ಬಿಎಂಸಿ) ಸೇರಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿರುವಂತೆಯೇ, ಮಹಾರಾಷ್ಟ್ರದಲ್ಲಿ ‘ರಾಜಕೀಯ ಸಮೀಕರಣ’ಗಳು ಬದಲಾಗುತ್ತಿವೆ.
ರಾಜ್ಯದಲ್ಲಿ ಬಿಜೆಪಿ ಜೊತೆ ಕೈಜೋಡಿಸಿರುವ ಡಿಸಿಎಂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣವು, ಈಗ ಈ ಚುನಾವಣೆಯಲ್ಲಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಜೊತೆ ಕೈಜೋಡಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಎನ್‌ಡಿಟಿವಿ ಹಾಗೂ ಪಿಟಿಐಗೆ ನೀಡಿರುವ ಪ್ರತ್ಯೇಕ ಸಂದರ್ಶನಗಳಲ್ಲಿ ಡಿಸಿಎಂ ಅಜಿತ್ ಪವಾರ್ ನೀಡಿರುವ ಹೇಳಿಕೆಗಳು ಇಂತಹ ಸಾಧ್ಯತೆಗಳನ್ನು ಪುಷ್ಟಿಕರಿಸುವಂತಿವೆ.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಅಜಿತ್ ಪವಾರ್ ಅವರು, ಪುಣೆ ಮತ್ತು ಪಿಂಪ್ರಿ ಚಿಂಚವಾಡದಲ್ಲಿನ ಬಿಜೆಪಿಯ ಸ್ಥಳೀಯ ನಾಯಕರ ವಿರುದ್ಧ ಹರಿಹಾಯ್ದಿದಿದ್ದಾರೆ.
ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ, ‘ರಾಜಕೀಯ ಪಕ್ಷಗಳು ತಮ್ಮ ಸಿದ್ಧಾಂತಗಳಿಂದ ವಿಮುಖವಾಗಿವೆ. ಪಕ್ಷ ತೊರೆಯುವುದು ಇಲ್ಲವೇ ಒಂದು ಪಕ್ಷದ ನಾಯಕರಿಗೆ ಆಮಿಷ ಒಡ್ಡಿ ತಮ್ಮತ್ತ ಸೆಳೆಯುವ ಪರಿಪಾಟ ಹೆಚ್ಚುತ್ತಿದೆ’ ಎಂದು ಹೇಳುವ ಮೂಲಕ ಬಿಜೆಪಿ ನಾಯಕ ವಿರುದ್ಧ ಟೀಕಾಪ್ರಹಾರ ಮುಂದುವರಿಸಿದ್ದಾರೆ.
ಮತ್ತೊಂದೆಡೆ, ಎನ್‌ಡಿಟಿವಿಗೆ ಸಂದರ್ಶನ ನೀಡಿರುವ ಅವರು,‘ಎನ್‌ಸಿಪಿಯ ಎರಡೂ ಬಣಗಳು ಒಂದುಗೂಡಬೇಕು ಎಂಬುದು ಎರಡೂ ಪಕ್ಷಗಳ ಕಾರ್ಯಕರ್ತರ ಒತ್ತಾಸೆಯಾಗಿದೆ. ಪವಾರ್ ಕುಟುಂಬಗಳಲ್ಲಿನ ಭಿನ್ನಾಭಿಪ್ರಾಯಗಳು ಈಗ ಇತ್ಯರ್ಥವಾಗಿವೆ’ ಎಂದು ಹೇಳಿದ್ದಾರೆ.
‘ರಾಜಕೀಯದಲ್ಲಿ ಈಗ ಬಹಿರಂಗವಾಗಿಯೇ ಹಣ ಮತ್ತು ತೋಳ್ಬಲ ಪ್ರದರ್ಶನ ನಡೆಯುತ್ತಿದೆ. ಇಂಥ ಬಲ ಹೊಂದಿರುವವರು ಇವುಗಳನ್ನೇ ಬಳಸುತ್ತಿದ್ದಾರೆ. ಜಾತಿ ವಿಚಾರ ಮುಂದು ಮಾಡಿ ಮತಗಳನ್ನು ಗಳಿಸಬಹುದು ಎಂದು ಭಾವಿಸಿರುವವರು ಅದನ್ನೇ ತಮ್ಮ ತಂತ್ರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ’ ಎಂದೂ ಹೇಳಿದ್ದಾರೆ.
ಖಚಿತಪಡಿಸಿರುವ ಸುಳೆ: ಪಿಂಪ್ರಿ ಚಿಂಚವಾಡ್ ನಗರ ಪಾಲಿಕೆ ಚುನಾವಣೆಗಾಗಿ ಎನ್‌ಸಿಪಿಯ ಎರಡೂ ಬಣಗಳು ಒಂದಾಗಲು ನಿರ್ಧರಿಸುವುದನ್ನು ಸಂಸದೆ ಸುಪ್ರಿಯಾ ಸುಳೆ(ಎನ್‌ಸಿಪಿ ಶರದ್ ಪವಾರ್ ಬಣ) ಕೂಡ ಖಚಿತಪಡಿಸಿದ್ದಾರೆ.
ಎನ್‌ಡಿಟಿವಿ ಜೊತೆ ಮಾತನಾಡಿರುವ ಅವರು,‘ಅಜಿತ್ ಪವಾರ್ ಬಣದೊಂದಿಗಿನ ಈ ಮೈತ್ರಿಯನ್ನು ಈ ಸ್ಥಳೀಯ ಚುನಾವಣೆ ಬಳಿಕವೂ ಮುಂದುವರಿಸುವ ಕುರಿತು ಚರ್ಚೆ ನಡೆದಿಲ್ಲ’ ಎಂದೂ ಸ್ಪಷ್ಟಪಡಿಸಿದ್ದಾರೆ.
ಅಭ್ಯರ್ಥಿಗಳ ಜನಪ್ರಿಯತೆ ಅಳೆಯಲು ಸಮೀಕ್ಷೆಗಳನ್ನು ನಡೆಸುವ ಹೊಸ ಪ್ರವೃತ್ತಿ ಆರಂಭವಾಗಿದೆ. ವಿಪಕ್ಷ ಪಾಳಯದ ಅಭ್ಯರ್ಥಿಗೆ ಗೆಲ್ಲುವ ಸಾಮರ್ಥ್ಯ ಇರುವುದು ಸಮೀಕ್ಷೆಯಿಂದ ಗೊತ್ತಾದಾಗ ಆ ಅಭ್ಯರ್ಥಿಯನ್ನು ತಮ್ಮ ಪಕ್ಷಕ್ಕೆ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆಅಜಿತ್ ಪವಾರ್ ಎನ್‌ಸಿಪಿ(ಅಜಿತ್ ಪವಾರ್ ಬಣ) ನಾಯಕ
ಬಿಜೆಪಿ ಹೊರಗಿಡಲು ಒಂದಾದ ಶಿಂದೆ–ಅಜಿತ್ ಬಣ
ಠಾಣೆ: ಮಹತ್ವದ ಬೆಳವಣಿಗೆಯಲ್ಲಿ ಠಾಣೆ ಜಿಲ್ಲೆಯ ಅಂಬರನಾಥ ನಗರಸಭೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಏಕನಾಥ ಶಿಂದೆ ಅವರ ಶಿವಸೇನಾ ಬಣ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಶುಕ್ರವಾರ ಮೈತ್ರಿ ಮಾಡಿಕೊಂಡಿವೆ. ನಗರಸಭೆಯ ಒಬ್ಬ ಪಕ್ಷೇತರ ಸದಸ್ಯ ಕೂಡ ಈ ಮೈತ್ರಿಕೂಟದೊಂದಿಗೆ ಗುರುತಿಸಿಕೊಂಡಿದ್ದು ಈ ಗುಂಪು ಈಗ ಸ್ಥಳೀಯ ಸಂಸ್ಥೆಯ ಆಡಳಿತ ಚುಕ್ಕಾಣಿ ಹಿಡಿಯುವುದಕ್ಕೆ ಸಂಬಂಧಿಸಿ ಹಕ್ಕು ಮಂಡಿಸಲು ಮುಂದಾಗಿದೆ. ‘ಈ ಕುರಿತ ಪತ್ರವನ್ನು ಜಿಲ್ಲಾ ಆಡಳಿತಕ್ಕೆ ಸಲ್ಲಿಸಲಾಗಿದೆ’ ಎಂದು ಶಿವಸೇನಾ ಪಕ್ಷದ ಸ್ಥಳೀಯ ನಾಯಕರೊಬ್ಬರು ತಿಳಿಸಿದ್ದಾರೆ. ಬಿಜೆಪಿಯೊಂದಿಗೆ ಕೈಜೋಡಿಸಿ ಅಧಿಕಾರ ಹಿಡಿದಿದ್ದರಿಂದ ತನ್ನ 12 ಜನ ಸದಸ್ಯರನ್ನು ಕಾಂಗ್ರೆಸ್ ಪಕ್ಷ ಅಮಾನತುಗೊಳಿಸಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಬಿಜೆಪಿಯನ್ನು ಹೊರಗಿಟ್ಟು ಅಧಿಕಾರಕ್ಕೇರುವ ಸಲುವಾಗಿ ಈ ಹೊಸ ಗುಂಪು ರಚನೆಯಾಗಿದೆ.
ಅಭ್ಯರ್ಥಿಗಳ ಮೇಲೆ ಕಲ್ಲು ತೂರಾಟ: ಶಿಂದೆ ಬಣ ಆರೋಪ
ಪುಣೆ: ‘ಪುಣೆ ಪಾಲಿಕೆಯ ಚುನಾವಣೆಗೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಪಕ್ಷದ ಅಭ್ಯರ್ಥಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಇದು ಹೇಡಿಗಳ ಕೃತ್ಯ. ಇಂತಹ ರಾಜಕೀಯಕ್ಕೆ ನಾವು ಹೆದರುವುದಿಲ್ಲ’ ಎಂದು ಡಿಸಿಎಂ ಏಕನಾಥ ಶಿಂದೆ ಶುಕ್ರವಾರ ಹೇಳಿದ್ದಾರೆ. ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು‘ವಿಪಕ್ಷಗಳು ಇಂತಹ ಕೃತ್ಯ ನಡೆಸಬಾರದು. ನಾವು ಬಾಳಾ ಸಾಹೇಬ ಠಾಕ್ರೆ ಅವರ ಸೈನಿಕರು. ಇಂತಹ ಕೃತ್ಯಗಳಿಗೆ ಹೆದರುವುದಿಲ್ಲ’ ಎಂದು ಹೇಳಿದರು. ‘ನನ್ನ ಹಾಗೂ ಪಕ್ಷದ ಮತ್ತೊಬ್ಬ ಅಭ್ಯರ್ಥಿ ಸಾರಿಕಾ ಪವಾರ್ ಮೇಲೆ ಬುಧವಾರ ತಡರಾತ್ರಿ ಕಲ್ಲು ಎಸೆಯಲಾಗಿದೆ’ ಎಂದು ವಾರ್ಡ್ ನಂ.41ರ ಅಭ್ಯರ್ಥಿ ಪ್ರಮೋದ್ ನಾನಾ ಭಂಗೀರೆ ಆರೋಪಿಸಿದ್ದಾರೆ. ‘ಸಾರಿಕಾ ಅವರಿಗೆ ಸಣ್ಣಪುಟ್ಟ ಗಾಯಗಳಿವೆ. ನನ್ನ ಕಾರಿನ ಕಿಟಕಿ ಗಾಜಿಗೆ ಹಾನಿಯಾಗಿದೆ’ ಎಂದೂ ಅವರು ಹೇಳಿದ್ದಾರೆ. ಪುಣೆ ಪಾಲಿಕೆಗೆ ಜನವರಿ 15ರಂದು ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.