ADVERTISEMENT

ಆಗಸ್ಟ್ 14- ವಿಭಜನೆಯ ಕರಾಳ ನೆನಪಿನ ದಿನ: ಪ್ರಧಾನಿ ನರೇಂದ್ರ ಮೋದಿ

ಕೇಂದ್ರ ಗೃಹ ಸಚಿವಾಲಯದಿಂದ ಅಧಿಸೂಚನೆ

ಪಿಟಿಐ
Published 14 ಆಗಸ್ಟ್ 2021, 20:22 IST
Last Updated 14 ಆಗಸ್ಟ್ 2021, 20:22 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ : ದೇಶ ವಿಭಜನೆಯ ದಿನವಾದ ಆಗಸ್ಟ್ 14 ಅನ್ನು, ಇನ್ನು ಮುಂದೆ ‘ವಿಭಜನೆಯ ಕರಾಳ ನೆನಪಿನ ದಿನ’ವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಟ್ವೀಟ್‌ ಮೂಲಕ ಘೋಷಿಸಿದ್ದಾರೆ.

ಪ್ರಧಾನಿ ಮೋದಿ ಘೋಷಣೆ ಮಾಡಿದ ಕೆಲ ಗಂಟೆಗಳಲ್ಲೇ, ಕೇಂದ್ರ ಗೃಹ ಸಚಿವಾಲಯವು ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ.

ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ, ವಿಭಜನೆಯ ಸಂದರ್ಭವನ್ನು ನೆನಪಿಸಿಕೊಂಡಿರುವ ಪ್ರಧಾನಿ, ‘ವಿಭಜನೆಯ ನೋವನ್ನು ಎಂದಿಗೂ ಮರೆಯಲಾಗದು. ತಿಳಿಗೇಡಿಗಳಿಂದ ಭುಗಿಲೆದ್ದ ದ್ವೇಷ–ಹಿಂಸಾಚಾರದಲ್ಲಿ ನಮ್ಮ ಲಕ್ಷಾಂತರ ಸೋದರ ಸೋದರಿಯರು ಸ್ಥಳಾಂತರ ಗೊಳ್ಳಬೇಕಾಯಿತು; ಆ ಸಂದರ್ಭದಲ್ಲಿ ಅನೇಕರು ಪ್ರಾಣ ಕಳೆದುಕೊಂಡರು’ ಎಂದು ಹೇಳಿದ್ದಾರೆ.

ADVERTISEMENT

ಅವರ ಹೋರಾಟ ಹಾಗೂ ತ್ಯಾಗದ ಸ್ಮರಣೆಗಾಗಿ ಆಚರಿಸುವ ಈ ದಿನವು, ಸಮಾಜ ವಿಭಜಿಸುವ, ಸಾಮರಸ್ಯವನ್ನು ಕದಡುವಂಥ ವಿಷವನ್ನು ತೆಗೆದುಹಾಕುವ ಅಗತ್ಯವನ್ನು ನೆನಪಿಸುತ್ತದೆ ಹಾಗೂ ನಮ್ಮ ಏಕತೆಯ ಭಾವಕ್ಕೆ, ಸಾಮಾಜಿಕ ಸಾಮರಸ್ಯ ಮತ್ತು ಮಾನವ ಸಬಲೀಕರಣಕ್ಕೆ ಬಲ ತುಂಬಲಿದೆ’ ಎಂದು ಹೇಳಿದ್ದಾರೆ.

ದೇಶ ವಿಭಜನೆಯಾದ ದಿವಸದಂದು (ಆ. 14) ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಗುತ್ತಿದೆ. ಭಾರತವು, ಇಂದು (ಆ.15) ಸ್ವಾತಂತ್ರ್ಯೋತ್ಸವ ಆಚರಿಸುತ್ತಿದೆ.

ಈ ದಿನವು, ‘ವಿಭಜನೆಯ ಸಂದರ್ಭದಲ್ಲಿ ಮೃತಪಟ್ಟವರಿಗೆ ಹಾಗೂ ತಮ್ಮ ಬೇರಿನಿಂದ ದೂರ ಆದವರಿಗೆ ಸಲ್ಲಿಸುವ ಗೌರವ’ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೇಳಿದೆ. ಜೊತೆಗೆ, ವಿಭಜನೆಯ ಸಂದರ್ಭದಲ್ಲಿ ಜನರು ಅನುಭವಿಸಿದ ನೋವು–ಸಂಕಟವನ್ನು ದೇಶದ ಈಗಿನ ಹಾಗೂ ಮುಂಬರುವ ಪೀಳಿಗೆಗೆ ನೆನಪು ಮಾಡುತ್ತಿರುತ್ತದೆ’ ಎಂದು ಅಭಿಪ್ರಾಯಪಟ್ಟಿದೆ.

‘ಯಾವುದೇ ದೇಶಕ್ಕೆ, ಸ್ವಾತಂತ್ರ್ಯದಿನವೆಂಬುದು ಸಂಭ್ರಮದ ಹಾಗೂ ಹೆಮ್ಮೆಯ ಸಂದರ್ಭ. ಆದರೆ, ನಾವು ಆ.15ರಂದು ಆಚರಿಸುತ್ತಿರುವ ಸ್ವಾತಂತ್ರ್ಯದ ಈ ಸಿಹಿಯೊಂದಿಗೆ ದೇಶ ವಿಭಜನೆಯ ಗಾಯವೂ ಇದೆ. ವೇದನೆಯ ಈ ಗಾಯ, ಲಕ್ಷಾಂತರ ಭಾರತೀಯರಲ್ಲಿ ಮಾಸದ ಕಲೆಗಳನ್ನು ಉಳಿಸಿದೆ’ ಎಂದು ಹೇಳಿದೆ.

‘ವಿಭಜನೆ ಹೊತ್ತಿಸಿದ ಹಿಂಸಾಚಾರದಲ್ಲಿ ಜೀವ ಕಳೆದುಕೊಂಡವರ ಮಕ್ಕಳಿಗೂ, ಸ್ವಾತಂತ್ರ್ಯದ ದಿನ ಆಚರಿಸುವ ಈ ಸಂದರ್ಭದಲ್ಲಿದೇಶವು ವಂದಿಸುತ್ತದೆ’ ಎಂದು ತಿಳಿಸಿದೆ.

ಪ್ರಧಾನಿ ನಿರ್ಧಾರವನ್ನು ಶ್ಲಾಘಿಸಿರುವ ಬಿಜೆಪಿ, ‘ಕಾಂಗ್ರೆಸ್’ ಮಹತ್ವಾಕಾಂಕ್ಷೆಯಿಂದ ನೋವುಂಡ
ವರಿಗೆ ಸಲ್ಲಿಸುವ ಸೂಕ್ತ ಗೌರವ ಎಂದಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಇಂಥದ್ದೊಂದು ಸಂವೇದನಾಶೀಲ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ಪ್ರಧಾನಿಯನ್ನು ಅಭಿನಂದಿಸುವುದಾಗಿ
ಹೇಳಿದ್ದಾರೆ. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್‌, ಧರ್ಮೇಂದ್ರ ಪ್ರಧಾನ್ ಕೂಡ ಪ್ರಧಾನಿ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.