ನವದೆಹಲಿ: ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್, ಬುಡಕಟ್ಟು ಸಮುದಾಯಗಳ ಮೇರು ನಾಯಕ ಬಿರ್ಸಾ ಮುಂಡಾ ಅವರ 150ನೇ ಜಯಂತಿ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವ ಆಚರಿಸಲು ಕೇಂದ್ರ ಸರ್ಕಾರ ಮೂರು ಉನ್ನತ ಮಟ್ಟದ ಸಮಿತಿಗಳನ್ನು ರಚಿಸಿದೆ.
ಈ ಸಂಬಂಧ ಕೇಂದ್ರ ಸಂಸ್ಕೃತಿ ಸಚಿವಾಲಯ 3 ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಮಿತಿಗಳ ಮುಖ್ಯಸ್ಥರಾಗಿರುತ್ತಾರೆ.
1875ರ ಅಕ್ಟೋಬರ್ 31 ರಂದು ಜನಿಸಿದ ಪಟೇಲ್, ಸ್ವಾತಂತ್ರ್ಯ ಹೋರಾಟಗಾರ ಮತ್ತು ಸ್ಪತಂತ್ರ ಭಾರತದ ಮೊದಲ ಗೃಹ ಸಚಿವರಾಗಿದ್ದರು. ಅವರನ್ನು 'ಭಾರತದ ಉಕ್ಕಿನ ಮನುಷ್ಯ' ಎಂದೂ ಕರೆಯುತ್ತಾರೆ.
ಅವಿಭಜಿತ ಬಿಹಾರದ ಬುಡಕಟ್ಟು ಪ್ರದೇಶದಲ್ಲಿ 1875ರಲ್ಲಿ ಜನಿಸಿದ ಬಿರ್ಸಾ ಮುಂಡಾ, ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆ ಮತ್ತು ಮತಾಂತರ ಚಟುವಟಿಕೆಗಳ ವಿರುದ್ಧ ಹೋರಾಟಕ್ಕೆ ಆದಿವಾಸಿಗಳನ್ನು ಒಟ್ಟುಗೂಡಿಸಿದ್ದರು.
ವಾಜಪೇಯಿ ಅವರು ಮೂರು ಬಾರಿ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಆಡಳಿತದ ಅವಧಿಯಲ್ಲಿ (1998) ಭಾರತ 2ನೇ ಪರಮಾಣು ಪರೀಕ್ಷೆ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.