ನವದೆಹಲಿ: ಡಕಾಯಿತರನ್ನು 35 ವರ್ಷಗಳ ಹಿಂದೆ ಕೊಂದು ಜನರನ್ನು ರಕ್ಷಿಸಿದ್ದ 83 ವರ್ಷದ ನಿವೃತ್ತ ಪೊಲೀಸ್ ಕಾನ್‌ಸ್ಟೆಬಲ್‌ಗೆ ₹5 ಲಕ್ಷ ಗೌರವಧನ ನೀಡಲು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.
ಕಾನ್‌ಸ್ಟೆಬಲ್ ಆಗಿದ್ದ ರಾಮ್ ಅವತಾರ್ ಸಿಂಗ್ ಯಾದವ್ ಅವರು ಡಕಾಯಿತರನ್ನು ಕೊಂದು, ಜನರನ್ನು ರಕ್ಷಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದರು. ಇದಕ್ಕಾಗಿ ತಮಗೆ ಗೌರವಧನ ನೀಡುವಂತೆ ರಾಜ್ಯಸರ್ಕಾರಕ್ಕೆ ಆದೇಶಿಸಲು ಕೋರಿ ಅವರು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದರು.
‘ಇಂಥ ಸಂಗತಿಗಳು ಗ್ರಾಮೀಣ ಭಾಗದಲ್ಲಿ ಹೆಚ್ಚು ಮಾನ್ಯತೆ ಹೊಂದಿರುತ್ತವೆ. ಈ ಪ್ರಕರಣದಲ್ಲಿ ಅರ್ಜಿದಾರರಿಗೆ ಹಣವೇ ಮುಖ್ಯವೆಂದಲ್ಲ. ಅದು ಅವರಿಗೆ ದೊರಕುವ ಗೌರವದ ಸಂಕೇತ. ನಿಮ್ಮ ಸಹಕಾರದಿಂದ ಅವರಿಗೆ ಪ್ರಶಂಸಾಪತ್ರ ಸಿಕ್ಕಿದೆ. ಇದಕ್ಕಾಗಿ ಉತ್ತರ ಪ್ರದೇಶ ಸರ್ಕಾರ ಉತ್ತಮ ಕ್ರಮ ಕೈಗೊಂಡಿದೆ’ ಎಂದು ನ್ಯಾ. ಸೂರ್ಯ ಕಾಂತ್, ನ್ಯಾ. ದೀಪಂಕರ್ ದತ್ತ ಹಾಗೂ ನ್ಯಾ. ಉತ್ತಲ್ ಭುಯಾನ್ ಅವರಿದ್ದ ಪೀಠ ಹೇಳಿತು.
‘ರಾಜ್ಯ ಸರ್ಕಾರವು ಇಂಥ ಸಾಧನೆ ಮಾಡಿದ ವ್ಯಕ್ತಿಗಳಿಗೆ ₹1 ಲಕ್ಷ ಗೌರವಧನ ನೀಡಲಷ್ಟೇ ಕಾನೂನಿನಲ್ಲಿ ಅವಕಾಶವಿದೆ. ಹೀಗಿದ್ದರೂ, ಅರ್ಜಿದಾರರಿಗೆ ಪ್ರಮಾಣಪತ್ರ ನೀಡಲಾಗಿದೆ’ ಎಂದು ಅರ್ಜಿದಾರರ ಪರ ವಕೀಲೆ ರುಚಿರಾ ಗೋಯಲ್ ಪೀಠದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಈ ಮೊದಲು ₹10 ಲಕ್ಷ ಗೌರವಧನಕ್ಕೆ ಆದೇಶಿಸಲು ತೀರ್ಮಾನಿಸಲಾಗಿತ್ತು. ಆದರೆ ರಾಜ್ಯ ಸರ್ಕಾರದ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯನ್ನೂ ಗಮನಿಸಿ ₹5ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಆದರೆ ಈ ಪ್ರಕರಣದಲ್ಲಿ ನೀಡಲಾಗುತ್ತಿರುವ ಆದೇಶವು, ಇತರ ಪ್ರಕರಣಗಳಿಗೆ ಅನ್ವಯವಾಗದಂತೆ ಆದೇಶ ಬರೆಯಲಾಗುವುದು’ ಎಂದು ಪೀಠ ಹೇಳಿತು.
ಇದಕ್ಕೂ ಮೊದಲು ರಾಮ್ ಅವತಾರ್ ಸಿಂಗ್ ಯಾದವ್ ಅವರು 2023ರಲ್ಲಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ 34 ವರ್ಷದ ಹಿಂದಿನ ಪ್ರಕರಣ ಎಂದು ಪೀಠವು ಅರ್ಜಿಯನ್ನು ವಜಾಗೊಳಿಸಿತು. ನಂತರ ಅವರು ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.