ADVERTISEMENT

ಹೋಳಿ ಸಂಭ್ರಮವನ್ನು ಅಲ್ಪಸಂಖ್ಯಾತರಿಗೆ ಭಯ ಮೂಲವಾಗಿಸಿದ ಮತಾಂಧರು: ಮುಫ್ತಿ ಆರೋಪ

ಪಿಟಿಐ
Published 15 ಮಾರ್ಚ್ 2025, 4:05 IST
Last Updated 15 ಮಾರ್ಚ್ 2025, 4:05 IST
<div class="paragraphs"><p>ಮೆಹಬೂಬಾ ಮುಫ್ತಿ</p></div>

ಮೆಹಬೂಬಾ ಮುಫ್ತಿ

   

ಶ್ರೀನಗರ: ಅಧಿಕಾರಶಾಹಿಯ ಬೆಂಬಲ ಹೊಂದಿರುವ ಕೆಲವು ಮತಾಂಧರು ಹೋಳಿ ಸಂಭ್ರಮಾಚರಣೆಯನ್ನು ಅಲ್ಪಸಂಖ್ಯಾತ ಸಮುದಾಯದವರಿಗೆ 'ಭಯದ ಮೂಲ'ವನ್ನಾಗಿ ಪರಿವರ್ತಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಶುಕ್ರವಾರ ಆರೋಪಿಸಿದ್ದಾರೆ.

ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ (ಪಿಡಿಪಿ) ಮುಖ್ಯಸ್ಥೆಯೂ ಆಗಿರುವ ಮುಫ್ತಿ, ಹೋಳಿ ಹಾಗೂ ರಂಜಾನ್‌ ಹಬ್ಬ 'ಜುಮ್ಮಾ ನಮಾಜ್‌'ಗೆ ಸಂಬಂಧಿಸಿದಂತೆ ಶುಕ್ರವಾರ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌/ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಮುಫ್ತಿ, 'ನನ್ನ ಪಾಲಿಗೆ ಹೋಳಿಯು, ಭಾರತದ ಗಂಗಾ–ಯಮುನಾ ಸಂಸ್ಕಾರವನ್ನು ಸದಾ ಸಂಕೇತವಾಗಿದೆ. ಈ ಹಬ್ಬಕ್ಕಾಗಿ ಕಾಯುತ್ತಿದ್ದ ಹಾಗೂ ಹಿಂದೂ ಸ್ನೇಹಿತರೊಂದಿಗೆ ಸಂಭ್ರಮದಿಂದ, ಉತ್ಸಾಹದಿಂದ ಆಚರಿಸುತ್ತಿದ್ದ ದಿನಗಳನ್ನು ಪ್ರೀತಿಯಿಂದ ನೆನೆಯುತ್ತೇನೆ' ಎಂದಿದ್ದಾರೆ.

ಮುಂದುವರಿದು, 'ಇದೀಗ ಕೆಲವು ಧರ್ಮಾಂಧರು ಈ ಆಚರಣೆಯನ್ನು ಅಧಿಕಾರದಲ್ಲಿರುವವರ ಬೆಂಬಲದೊಂದಿಗೆ ಅಲ್ಪಸಂಖ್ಯಾತದಲ್ಲಿ ಭಯದ ಮೂಲವನ್ನಾಗಿ ಪರಿವರ್ತಿಸಿದ್ದಾರೆ. ಭಾರತ ಎಚ್ಚೆತ್ತುಕೊಳ್ಳಬೇಕಾದ ಸಮಯ ಇದಾಗಿದೆ' ಎಂದು ಬರೆದುಕೊಂಡಿದ್ದಾರೆ.

ದೇಶದಲ್ಲಿ ಶಾಂತಿಯ ವಾತಾವರಣವನ್ನು ಕದಡಲಾಗುತ್ತಿದೆ. ಹಿಂದೂ – ಮುಸ್ಲಿಮರನ್ನು ಪರಸ್ಪರ ಎತ್ತಿಕಟ್ಟಲಾಗುತ್ತಿದೆ. ಇದರಿಂದ ದೇಶವು ಅಪಾಯಕಾರಿ ಪರಿಣಾಮಗಳನ್ನು ಎದುರಿಸಲಿದೆ ಎಂದು ಗುರುವಾರವಷ್ಟೇ ಕಳವಳ ವ್ಯಕ್ತಪಡಿಸಿದ್ದರು.

ಈ ಬಾರಿಯ ಹೋಳಿ ಹಬ್ಬ ಹಾಗೂ ರಂಜಾನ್‌ ಮಾಸದ ಎರಡನೇ ಶುಕ್ರವಾರವನ್ನು ದೇಶದಾದ್ಯಂತ ಒಟ್ಟೊಟ್ಟಿಗೆ (ಮಾರ್ಚ್‌ 14ರಂದು) ಸಂಭ್ರಮದಿಂದ ಆಚರಿಸಲಾಯಿತು. ದೇಶದಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.