ADVERTISEMENT

ಪೆಗಾಸಸ್| ಕೇಂದ್ರದ ನಡೆಗೆ ‘ಸುಪ್ರೀಂ’ ಅತೃಪ್ತಿ

ಪೆಗಾಸಸ್‌ ಬೇಹುಗಾರಿಕೆ ಪ್ರಕರಣ: ಪ್ರಮಾಣಪತ್ರ ಸಲ್ಲಿಕೆಗೆ ಸರ್ಕಾರ ಹಿಂದೇಟು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 19:36 IST
Last Updated 13 ಸೆಪ್ಟೆಂಬರ್ 2021, 19:36 IST
   

ನವದೆಹಲಿ: ಪೆಗಾಸಸ್‌ ಕುತಂತ್ರಾಂಶ ಬಳಸಿ ಗೂಢಚರ್ಯೆ ನಡೆಸಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ವಿವರವಾದ ಪ್ರಮಾಣಪತ್ರ ಸಲ್ಲಿಸಲು ನಿರಾಕರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಸರ್ಕಾರದ ಸಂಸ್ಥೆಗಳುವಿವಿಧ ವರ್ಗಗಳ ಜನರ ಮೇಲೆಇಸ್ರೇಲ್‌ ನಿರ್ಮಿತ ಕುತಂತ್ರಾಂಶ ಬಳಸಿ ಬೇಹುಗಾರಿಕೆ ನಡೆಸಿದೆಯೇ ಇಲ್ಲವೇ ಎಂಬುದನ್ನು ಬಹಿರಂಗಪಡಿಸುವ ವಿಚಾರದಲ್ಲಿ ಮೀನ ಮೇಷ ಎಣಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಕೋರ್ಟ್‌ ಹೇಳಿದೆ.

ಕುತಂತ್ರಾಂಶ ಬಳಸಿ ಬೇಹುಗಾರಿಕೆ ಆರೋಪದ ಬಗ್ಗೆ ಸ್ವತಂತ್ರ ತನಿಖೆಗೆ ಕೋರಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠವು ಸೋಮವಾರ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಮಧ್ಯಂತರ ಆದೇಶವನ್ನು ಕಾಯ್ದಿರಿಸಿತು.

ADVERTISEMENT

ಕೇಂದ್ರ ಸರ್ಕಾರವು ತಳೆದಿರುವ ನಿಲುವಿನ ಬಗ್ಗೆ ಮರು ಚಿಂತನೆ ನಡೆಸಲು ಇನ್ನೂ ಎರಡು–ಮೂರು ದಿನಗಳ ಸಮಯ ಇದೆ ಎಂದು ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಪೀಠವು ತಿಳಿಸಿತು.

ರಾಷ್ಟ್ರೀಯ ಭದ್ರತೆಗೆ ಧಕ್ಕೆ ಆಗುವಂತಹ ಏನನ್ನೂ ಸರ್ಕಾರವು ಬಹಿರಂಗಪಡಿಸಬೇಕಿಲ್ಲ ಎಂಬುದನ್ನು ಆಗಸ್ಟ್‌ 17ರಂದೇ ಸ್ಪಷ್ಟಪಡಿಸಲಾಗಿದೆ ಎಂಬುದನ್ನು ಪೀಠವು ನೆನಪಿಸಿತು.

‘ಸೀಮಿತವಾದ ಪ್ರಮಾಣಪತ್ರವನ್ನೇ ನಾವು ನಿರೀಕ್ಷೆ ಮಾಡಿದ್ದೆವು. ತಮ್ಮ ಹಕ್ಕುಗಳ ಉಲ್ಲಂಘನೆ ಆಗಿದೆ ಎಂದು ದೂರುದಾರರು ಹೇಳಿದ್ದಾರೆ. ಹಾಗಾಗಿ, (ಬೇಹುಗಾರಿಕೆಯನ್ನು) ಕಾನೂನುಬದ್ಧವಾಗಿ ಮಾಡಲಾಗಿದೆಯೇ ಅಥವಾ ಕಾನೂನು ಉಲ್ಲಂಘಿಸಿ ಮಾಡ
ಲಾಗಿದೆಯೇ ಎಂಬುದನ್ನು ತಿಳಿಸಬೇಕು’ ಎಂದು ಪೀಠವು ಹೇಳಿತು.

ಇಸ್ರೇಲ್‌ನ ಪೆಗಾಸಸ್‌ ಕುತಂತ್ರಾಂಶವನ್ನು ಬಳಸಿಕೊಂಡು ಬೇಹುಗಾರಿಕೆಗೆ ಒಳಗಾದ ಸುಮಾರು 50 ಸಾವಿರ ಜನರಲ್ಲಿ ಭಾರತದ ಕೆಲವು ಸಚಿವರು, ರಾಜಕಾರಣಿಗಳು, ಸಾಮಾಜಿಕ ಹೋರಾಟಗಾರರು, ಪತ್ರಕರ್ತರು ಮತ್ತು ಉದ್ಯಮಿಗಳು ಇದ್ದಾರೆ ಎಂದು ಅಂತರರಾಷ್ಟ್ರೀಯ ತನಿಖಾ ಪತ್ರಿಕೋದ್ಯಮ ಗುಂಪು ಜುಲೈ 18ರಂದು ವರದಿ ಮಾಡಿತ್ತು.ಈ ಪ್ರಕರಣದ ಕುರಿತು ಸ್ವತಂತ್ರ ತನಿಖೆಗೆ ಕೋರಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆ ಆಗಿವೆ.

‘ಪ್ರಮಾಣಪತ್ರದಿಂದ ರಾಷ್ಟ್ರೀಯ ಭದ್ರತೆಗೆ ಧಕ್ಕೆ’

ಬೇಹುಗಾರಿಕೆಯು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರ. ಹಾಗಾಗಿ, ನಿರ್ದಿಷ್ಟ ಕುತಂತ್ರಾಂಶ ಬಳಕೆಯ ಬಗ್ಗೆ ಪ್ರಮಾಣ‍ಪತ್ರ ಸಲ್ಲಿಸಿ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಹಾಗೆ ಮಾಡಿದರೆ, ಭಯೋತ್ಪಾದಕರು ಅಥವಾ ಭಯೋತ್ಪಾದನಾ ಸಂಘಟನೆಗಳು ಬೇಹುಗಾರಿಕೆಯಿಂದ ತಪ್ಪಿಸಿಕೊಳ್ಳುವ ಮಾರ್ಗ ಕಂಡುಕೊಳ್ಳಬಹುದು ಎಂದು ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಹೇಳಿದರು.

ಸರ್ಕಾರಕ್ಕೆ ಅಡಗಿಸಲು ಏನೂ ಇಲ್ಲ. ಸರ್ಕಾರದ ಜತೆಗೆ ಸಂಪರ್ಕ ಇಲ್ಲದ, ವಿಷಯ ಪರಿಣತರ ಸಮಿತಿಯಿಂದ ತನಿಖೆ ನಡೆಸಲು ಸರ್ಕಾರ ಸಿದ್ಧ ಎಂಬ ಹಳೆಯ ನಿಲುವನ್ನು ಅವರು ಪುನರುಚ್ಚರಿಸಿದರು.

‘ಪ್ರಮಾಣಪತ್ರ ಸಲ್ಲಿಕೆಯು ರಾಷ್ಟ್ರೀಯ ಭದ್ರತೆಗೆ ಮಾರಕ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಪ್ರಮಾಣಪತ್ರ ಸಲ್ಲಿಸದೇ ಇರುವುದು ನ್ಯಾಯಾಂಗ ಪ್ರಕ್ರಿಯೆಗೆ ಮಾರಕ. ಗೂಢಚರ್ಯೆ ತಂತ್ರಾಂಶ ಬಳಸುತ್ತಿರುವುದಾಗಿ ಸರ್ಕಾರವು ಸಂಸತ್ತಿಗೆ ಈಗಾಗಲೇ ಮಾಹಿತಿ ನೀಡಿದೆ’ ಎಂದು ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.