ADVERTISEMENT

ಖಾಸಗಿತನದ ಹಕ್ಕಿನ ಉಲ್ಲಂಘನೆಯಿಂದ ಪ್ರತಿ ಪ್ರಜೆಗೂ ರಕ್ಷಣೆ ಕೊಡಬೇಕಿದೆ: ಸುಪ್ರೀಂ

ಪಿಟಿಐ
Published 27 ಅಕ್ಟೋಬರ್ 2021, 21:27 IST
Last Updated 27 ಅಕ್ಟೋಬರ್ 2021, 21:27 IST
ಎನ್‌.ವಿ. ರಮಣ
ಎನ್‌.ವಿ. ರಮಣ   

ನವದೆಹಲಿ: ರಾಷ್ಟ್ರೀಯ ಭದ್ರತೆಯ ವಿಚಾರವನ್ನು ಮುಂದಿರಿಸಿ ನ್ಯಾಯಾಂಗವು ಹಿಂದೆ ಸರಿಯುವಂತೆ ಸರ್ಕಾರವು ಪ್ರತಿ ಬಾರಿಯೂ ಮಾಡುವುದು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಪೆಗಾಸಸ್‌ ಕುತಂತ್ರಾಂಶ ಬಳಸಿ ಬೇಹುಗಾರಿಕೆ ಪ್ರಕರಣದ ತನಿಖೆಗೆ ಮೂವರು ತಜ್ಞರ ಸಮಿತಿ ನೇಮಕದ ಆದೇಶ ಹೊರಡಿಸಿದ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠವು ಹೀಗೆ ಹೇಳಿದೆ.

‘ಪ್ರಜಾಪ್ರಭುತ್ವ ದೇಶದ ನಾಗರಿಕ ಸಮಾಜದ ಸದಸ್ಯರಿಗೆ ಖಾಸಗಿತನದ ಬಗ್ಗೆ ನಿರೀಕ್ಷೆಗಳು ಇರುತ್ತವೆ. ಖಾಸಗಿತನ ಎನ್ನುವುದು ಪತ್ರಕರ್ತರು ಅಥವಾ ಸಾಮಾಜಿಕ ಹೋರಾಟಗಾರರಿಗೆ ಸಂಬಂಧಿಸಿದ ವಿಚಾರ ಮಾತ್ರ ಅಲ್ಲ. ಖಾಸಗಿತನದ ಹಕ್ಕಿನ ಉಲ್ಲಂಘನೆಯಿಂದ ಭಾರತದ ಪ್ರತಿ ಪ‍್ರಜೆಗೂ ರಕ್ಷಣೆ ಕೊಡಬೇಕಿದೆ. ಈ ನಿರೀಕ್ಷೆಯ ನಮ್ಮ ಅಯ್ಕೆಗಳು ಮತ್ತು ಸ್ವಾತಂತ್ರ್ಯವನ್ನು ಚಲಾಯಿಸಲು ನಮ್ಮನ್ನು ಸಮರ್ಥರನ್ನಾಗಿಸುತ್ತದೆ’ ಎಂದು ಪೀಠವು ಹೇಳಿದೆ.

ರಾಷ್ಟ್ರೀಯ ಭದ್ರತೆಗೆ ಅಪಾಯ ಎಂಬ ಸರ್ಕಾರದ ಹೇಳಿಕೆಯು ನ್ಯಾಯಾಂಗವನ್ನು ಮೂಕಪ್ರೇಕ್ಷಕ ಆಗಿಸುವುದು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ದೇಶದಲ್ಲಿ ಜನರ ಮೇಲೆ ಬೇಕಾಬಿಟ್ಟಿ ಗೂಢಚರ್ಯೆಗೆ ಅವಕಾಶ ಇಲ್ಲ ಎಂದು ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ.

ADVERTISEMENT

ಮುಖ್ಯ ನ್ಯಾಯಮೂರ್ತಿ ಅವರೇ ಮೂವರು ಸದಸ್ಯರ ಪೀಠದ ಪರವಾಗಿ 46 ಪುಟಗಳ ಆದೇಶ ಬರೆದಿದ್ದಾರೆ. ರಾಷ್ಟ್ರೀಯ ಭದ್ರತೆಯು ಪರಿಗಣಿಸಬೇಕಾದ ವಿಚಾರ ಹೌದು. ಪ್ರಾಧಿಕಾರಗಳಿಗೆ ಕೆಲವು ಅಧಿಕಾರಗಳೂ ಇವೆ. ಇಂತಹ ವಿಚಾರಗಳಲ್ಲಿ ನ್ಯಾಯಾಂಗದ ಪರಿಶೀಲನೆಗೆ ಮಿತಿಯೂ ಇದೆ. ಹಾಗಿದ್ದರೂ ರಾಷ್ಟ್ರೀಯ ಭದ್ರತೆಯನ್ನು ಮುಂದಿಟ್ಟು ಸರ್ಕಾರವು ಏನು ಬೇಕಾದರೂ ಮಾಡಲು ಅವಕಾಶ ಇಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

ಮಾಹಿತಿ ಕ್ರಾಂತಿ ಯುಗ:ಈಗ ಜನರು ಮಾಹಿತಿ ಕ್ರಾಂತಿಯ ಯುಗದಲ್ಲಿ ಬದುಕುತ್ತಿದ್ದಾರೆ. ಜನರ ಎಲ್ಲ ದತ್ತಾಂಶಗಳು ಅಂತರ್ಜಾಲದಲ್ಲಿ ಅಥವಾ ಡಿಜಿಟಲ್‌ ರೂಪದಲ್ಲಿ ಸಂಗ್ರಹವಾಗಿರುತ್ತವೆ. ವ್ಯಕ್ತಿಯ ಮೇಲೆ ಗೂಢಚರ್ಯೆ ಆರಂಭವಾದರೆ ಆ ವ್ಯಕ್ತಿಯ ಖಾಸಗಿತನದ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ಕೋರ್ಟ್‌ ಹೇಳಿದೆ.

ತಂತ್ರಜ್ಞಾನವು ನಮ್ಮ ಜೀವನಮಟ್ಟವನ್ನು ಸುಧಾರಿಸಲು ಉಪಯುಕ್ತ ಎಂಬುದು ನಿಜ. ಅದೇ ಹೊತ್ತಿಗೆ, ವ್ಯಕ್ತಿಯ ಪವಿತ್ರವಾದ ಖಾಸಗಿತವನ್ನು ಉಲ್ಲಂಘಿಸುವುದಕ್ಕೂ ಇದನ್ನು ಬಳಸಿಕೊಳ್ಳಬಹುದಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಎಲ್ಲ ಮೂಲಭೂತ ಹಕ್ಕುಗಳ ಹಾಗೆಯೇ ಖಾಸಗಿತನದ ಹಕ್ಕಿಗೂ ನಿರ್ದಿಷ್ಟ ಮಿತಿಗಳು ಇವೆ ಎಂಬುದು ನಿಜ. ಆದರೆ, ಹೀಗೆ ಹೇರಲಾಗುವ ಯಾವುದೇ ನಿರ್ಬಂಧವು ಸಾಂವಿಧಾನಿಕ ಪರಿಶೀಲನೆಯಲ್ಲಿ ಸಿಂಧು ಎಂದು ಪರಿಗಣಿತವಾಗಬೇಕು ಎಂದು ಪೀಠ ಹೇಳಿದೆ.

---

‘ಮಾಧ್ಯಮದ ಪಾತ್ರದ ದಮನ’

ಪತ್ರಿಕಾ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ‘ಮುಖ್ಯವಾದ ಸ್ತಂಭ’. ಪತ್ರಿಕಾ ಮೂಲಗಳನ್ನು ರಕ್ಷಿಸುವುದು ಮಹತ್ವದ್ದಾಗಿರುವುದರಿಂದ ಪೆಗಾಸಸ್‌ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದು ಅಗತ್ಯವಾಗಿದೆ. ಜತೆಗೆ, ಬೇಹುಗಾರಿಕೆಗೆ ಅನುಸರಿಸಲಾದ ತಂತ್ರಗಳು ವ್ಯಾಪಕ ಪರಿಣಾಮವನ್ನು ಬೀರುವ ಸಾಧ್ಯತೆಯೂ ಇದೆ ಎಂದು ಪೀಠ ಹೇಳಿದೆ.ವಾಕ್‌ಸ್ವಾತಂತ್ರ್ಯದ ಮೇಲೆ ಆಗುವ ಪ್ರತಿಕೂಲ ಪರಿಣಾಮವು ಸಾರ್ವಜನಿಕ ನಿಗಾ ವ್ಯವಸ್ಥೆಯಾದ ಮಾಧ್ಯಮದ ಪಾತ್ರವನ್ನೇ ದಮನ ಮಾಡುತ್ತದೆ. ಇದು ನಿಖರ ಮತ್ತು ವಿಶ್ವಾಸಾರ್ಹ ಸುದ್ದಿ ಕೊಡುವ ಮಾಧ್ಯಮದ ಸಾಮರ್ಥ್ಯವನ್ನೇ ಕುಗ್ಗಿಸಬಹುದು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.