ADVERTISEMENT

ನರವಣೆ ಅವರ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪ್ರಕಟವಾಗಿಲ್ಲ: ಪೆಂಗ್ವಿನ್ ಇಂಡಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2026, 2:15 IST
Last Updated 10 ಫೆಬ್ರುವರಿ 2026, 2:15 IST
Venugopala K.
   Venugopala K.

ನವದೆಹಲಿ: ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಅವರ ಆತ್ಮಚರಿತ್ರೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ'ಯ ಪ್ರಕಾಶನ ಹಕ್ಕುಗಳನ್ನು ಹೊಂದಿರುವುದಾಗಿ ಪೆಂಗ್ವಿನ್ ರ್‍ಯಾಂಡಮ್ ಹೌಸ್ ಇಂಡಿಯಾ ಸ್ಪಷ್ಟಪಡಿಸಿದೆ.

ಈ ಪುಸ್ತಕ ಪ್ರಕಟಣೆಗೆ ಬಂದಿಲ್ಲ. ಮುದ್ರಿತ ಅಥವಾ ಡಿಜಿಟಲ್ ಪ್ರತಿಗಳನ್ನು ಪ್ರಕಟಣೆ, ವಿತರಣೆ, ಮಾರಾಟ ಅಥವಾ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿಲ್ಲ ಎಂದು ಪ್ರಕಾಶಕರು ಹೇಳಿದ್ದಾರೆ.

ಸೋಮವಾರದ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಪೆಂಗ್ವಿನ್ ಇಂಡಿಯಾ, ಇತ್ತೀಚಿನ ಸಾರ್ವಜನಿಕ ಚರ್ಚೆ ಮತ್ತು ಮಾಧ್ಯಮ ವರದಿಗಳಲ್ಲಿ ಬರುತ್ತಿರುವ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಅವರ ಆತ್ಮಚರಿತ್ರೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಪುಸ್ತಕದ ಏಕೈಕ ಪ್ರಕಾಶನ ಹಕ್ಕುಗಳನ್ನು ನಾವು ಹೊಂದಿದ್ದೇವೆ ಎಂದು ಸ್ಪಷ್ಟಪಡಿಸಲು ಪೆಂಗ್ವಿನ್ ರ್‍ಯಾಂಡಮ್ ಹೌಸ್ ಇಂಡಿಯಾ ಬಯಸುತ್ತದೆ. ಪುಸ್ತಕ ಪ್ರಕಟಣೆಗೆ ಬಂದಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಪುಸ್ತಕವನ್ನು ಮುದ್ರಿತ ಅಥವಾ ಡಿಜಿಟಲ್ ರೂಪದಲ್ಲಿ ಪ್ರಕಟಿಸಿಲ್ಲ. ವಿತರಣೆ, ಮಾರಾಟ ಅಥವಾ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿಲ್ಲ’ ಎಂದು ತಿಳಿಸಿದೆ.

ADVERTISEMENT

ಯಾವುದೇ ಸ್ವರೂಪದಲ್ಲಿ ಅಥವಾ ಯಾವುದೇ ವೇದಿಕೆಯಲ್ಲಿ ಪ್ರಸ್ತುತ ಪ್ರಸರಣದಲ್ಲಿರುವ ಪುಸ್ತಕದ ಯಾವುದೇ ಪ್ರತಿಗಳು ಹಕ್ಕುಸ್ವಾಮ್ಯ ಉಲ್ಲಂಘನೆಯ ವ್ಯಾಪ್ತಿಗೆ ಬರುತ್ತವೆ. ತಕ್ಷಣವೇ ಅವುಗಳನ್ನು ನಿಲ್ಲಿಸಬೇಕು ಎಂದು ಪೆಂಗ್ವಿನ್ ರ್‍ಯಾಂಡಮ್ ಹೌಸ್ ಇಂಡಿಯಾ ಹೇಳಿದೆ. ಪುಸ್ತಕದ ಕಾನೂನುಬಾಹಿರ ಮತ್ತು ಅನಧಿಕೃತ ಪ್ರಸರಣದ ವಿರುದ್ಧ ಕಾನೂನಿನಡಿಯಲ್ಲಿ ಲಭ್ಯವಿರುವ ಪರಿಹಾರಗಳನ್ನು ಬಳಸುತ್ತವೆ ಎಂದು ಪ್ರಕಾಶಕರು ಹೇಳಿದ್ದಾರೆ.

‘ಪ್ರಸ್ತುತ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಹರಿದಾಡುತ್ತಿರುವ ನರವಣೆ ಪುಸ್ತಕದ ಸಂಪೂರ್ಣ ಅಥವಾ ಭಾಗಶಃ ಪ್ರತಿ, ಮುದ್ರಣ, ಡಿಜಿಟಲ್, ಪಿಡಿಎಫ್ ಅಥವಾ ಯಾವುದೇ ಇತರ ಸ್ವರೂಪದ ಪ್ರತಿಗಳು ಹಕ್ಕುಸ್ವಾಮ್ಯದ ಉಲ್ಲಂಘನೆಯಾಗಿದೆ. ಅದನ್ನು ತಕ್ಷಣವೇ ನಿಲ್ಲಿಸಬೇಕು. ಪುಸ್ತಕದ ಕಾನೂನುಬಾಹಿರ ಮತ್ತು ಅನಧಿಕೃತ ಪ್ರಸರಣದ ವಿರುದ್ಧ ಪೆಂಗ್ವಿನ್ ರ್‍ಯಾಂಡಮ್ ಹೌಸ್ ಇಂಡಿಯಾ ಕಾನೂನಿನಲ್ಲಿ ಲಭ್ಯವಿರುವ ಪರಿಹಾರಗಳನ್ನು ಬಳಸುತ್ತದೆ’ಎಂದು ಎಕ್ಸ್ ಪೋಸ್ಟ್ ಹೇಳಿದೆ.

‘ಪ್ರಕಾಶಕರ ನಿಲುವನ್ನು ದಾಖಲೆಯಲ್ಲಿ ಇರಿಸಲು ಈ ಹೇಳಿಕೆನ್ನು ನೀಡಲಾಗುತ್ತಿದೆ’ಎಂದು ಅದು ತಿಳಿಸಿದೆ.

ಕಳೆದ ವಾರ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಅವರ ‘ಮುದ್ರಣ ಪೂರ್ವ ಪುಸ್ತಕ’ದ ಕೆಲ ಅಂಶಗಳನ್ನು ಉಲ್ಲೇಖಿಸಿದ್ದರು. ಅದನ್ನು ಆಡಳಿತ ಪಕ್ಷ ವಿರೋಧಿಸಿತ್ತು. ಅದಾದ ಬಳಿಕ, ಸಾರ್ವಜನಿಕವಾಗಿಯೂ ಪುಸ್ತಕದ ಕೆಲ ಅಂಶಗಳು ಹರಿದಾಡಿದ್ದು, ಚರ್ಚೆ ನಡೆಯುತ್ತಿದೆ.

ಈ ಮಧ್ಯೆ, ನರವಣೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಪುಸ್ತಕದ ಮುದ್ರಿತ ಪ್ರತಿಯನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಸುದ್ದಿ ವೇದಿಕೆಗಳಲ್ಲಿ ಕಂಡುಬಂದ ಮಾಹಿತಿ ಕುರಿತಂತೆ ದೆಹಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.