ADVERTISEMENT

ಮತದಾನ ಕೇಂದ್ರಗಳೇ ಈಗ ಲಸಿಕಾ ಕೇಂದ್ರಗಳು: ಅರವಿಂದ್‌ ಕೇಜ್ರಿವಾಲ್

ಪಿಟಿಐ
Published 7 ಜೂನ್ 2021, 9:50 IST
Last Updated 7 ಜೂನ್ 2021, 9:50 IST
ಅರವಿಂದ ಕೇಜ್ರಿವಾಲ್‌
ಅರವಿಂದ ಕೇಜ್ರಿವಾಲ್‌   

ನವದೆಹಲಿ: ‘ದೆಹಲಿಯ ಮತದಾನ ಕೇಂದ್ರಗಳನ್ನು ಲಸಿಕಾ ಕೇಂದ್ರಗಳನ್ನಾಗಿ ಮಾರ್ಪಾಡು ಮಾಡಲಾಗುವುದು. ಬೂತ್‌ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಮನೆ–ಮನೆಗಳಿಗೆ ತೆರಳಿ 45 ವರ್ಷ ಮೇಲ್ಪಟ್ಟವರಿಗೆ ‘ಜಹಾ ವೋಟ್‌, ವಹಾ ವ್ಯಾಕ್ಸಿನೇಷನ್‌’ ಅಭಿಯಾನದಡಿ ಲಸಿಕೆ ನೀಡುವ ಸಮಯವನ್ನು ಕಾಯ್ದಿರಿಸಲಿದ್ದಾರೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರು ಸೋಮವಾರ ತಿಳಿಸಿದರು.

‘ದೆಹಲಿಯಲ್ಲಿ 45 ವರ್ಷ ಮೇಲ್ಪಟ್ಟ ಗುಂಪಿಗೆ ಸೇರಿದ 57 ಲಕ್ಷ ಜನರಿದ್ದಾರೆ. ಈ ಪೈಕಿ 27 ಲಕ್ಷ ಜನರಿಗೆ ಲಸಿಕೆಯ ಮೊದಲ ಡೋಸ್‌ ಅನ್ನು ನೀಡಲಾಗಿದ್ದು, 30 ಲಕ್ಷ ಮಂದಿಗೆ ಲಸಿಕೆ ನೀಡಬೇಕಾಗಿದೆ. 45 ವರ್ಷ ಮೇಲ್ಪಟ್ಟವರು ಲಸಿಕಾ ಕೇಂದ್ರಗಳಿಗೆ ಆಗಮಿಸುತ್ತಿಲ್ಲ. ಹಾಗಾಗಿ ಈ ಕಾರ್ಯಕ್ರಮವನ್ನು ಆರಂಭಿಸಲಾಗಿದೆ’ ಎಂದು ಅವರು ಹೇಳಿದರು.

‘ದೆಹಲಿಯಲ್ಲಿ 280 ವಾರ್ಡ್‌ಗಳಿವೆ. ಮಂಗಳವಾರದಿಂದ ಪ್ರತಿನಿತ್ಯ 72 ವಾರ್ಡ್‌ಗಳ ಮನೆಗಳಿಗೆ ಬಿಎಲ್‌ಒಗಳು ಭೇಟಿ ನೀಡಲಿದ್ದಾರೆ. ಅರ್ಹ ವ್ಯಕ್ತಿಯನ್ನು ಗುರುತಿಸಿ, ಅವರನ್ನು ಹತ್ತಿರದ ಮತದಾನ ಕೇಂದ್ರಗಳಿಗೆ ಕಳುಹಿಸಲಿದ್ದಾರೆ. ಮತಗಟ್ಟೆಗಳು ಜನರ ಮನೆಗೆ ಹತ್ತಿರದಲ್ಲೇ ಇರುವುದರಿಂದ ಅವರು ಹೆಚ್ಚು ದೂರ ಪ್ರಯಣಿಸಬೇಕಾಗಿಲ್ಲ. ಅಲ್ಲದೆ ಅವರನ್ನು ಮತಗಟ್ಟೆಗಳಿಗೆ ಕರೆದೊಯ್ಯಲು ಇ–ರಿಕ್ಷಾ ವ್ಯವಸ್ಥೆಯನ್ನು ಮಾಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

‘ನಾಲ್ಕು ವಾರಗಳಲ್ಲಿ 280 ವಾರ್ಡ್‌ಗಳನ್ನು ಪೂರ್ಣಗೊಳಿಸುವ ಉದ್ದೇಶವನ್ನು ಹೊಂದಿದ್ದೇವೆ. ಮೂರು ತಿಂಗಳ ಬಳಿಕ ಎರಡನೇ ಡೋಸ್‌ ಅನ್ನು ನೀಡಲು ಇದೇ ರೀತಿಯ ಅಭಿಯಾನವನ್ನು ಕೈಗೊಳ್ಳಲಿದ್ದೇವೆ. 18–44 ವಯೋಮಾನದವರಿಗೆ ಅಗತ್ಯವಾದ ಪ್ರಮಾಣದಲ್ಲಿ ಲಸಿಕೆಗಳು ಲಭ್ಯವಾದ ಬಳಿಕ, ಅವರಿಗೂ ನಾವು ಈ ಕಾರ್ಯಕ್ರಮವನ್ನು ಪ್ರಾರಂಭಿಸುತ್ತೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.