ರಾಜನಾಥ್ ಸಿಂಗ್
ಬರ್ಪೇಟಾ: ‘ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಜನರಿಗೆ ತಪ್ಪು ಗ್ರಹಿಕೆ ಉಂಟಾಗಿದೆ. ಕಾಯ್ದೆಯಡಿ ಭಾರತದಲ್ಲಿ ವಾಸಿಸುವ ಯಾರ ಪೌರತ್ವವನ್ನೂ ವಾಪಸ್ ಪಡೆಯುವುದಿಲ್ಲ’ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ
ಅಸ್ಸಾಂನ ಬರ್ಪೇಟಾದಲ್ಲಿ ಬಿಜೆಪಿ ಅಭ್ಯರ್ಥಿ ಪನಿ ಭೂಷಣ್ ಚೌಧರಿ ಪರವಾಗಿ ಪ್ರಚಾರದಲ್ಲಿ ಭಾಗಿಯಾದ ಅವರು, ರ್‍ಯಾಲಿಯನ್ನು ಉದ್ದೇಶಿಸಿ ಗುರುವಾರ ಮಾತನಾಡಿದರು.
‘ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜನರು ತಪ್ಪಾಗಿ ಗ್ರಹಿಸಿದ್ದಾರೆ. ಕಾಯ್ದೆ ಯಾರ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ, ಬದಲಾಗಿ ಪೌರತ್ವವನ್ನು ನೀಡುತ್ತದೆ. ಇದಕ್ಕೆ ನಾನು ಭರವಸೆ ನೀಡುತ್ತೇನೆ’ ಎಂದರು.
ಇದೇ ವೇಳೆ ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಬಗ್ಗೆ ಉಲ್ಲೇಖಿಸಿ, ‘ಭಾರತ ರಾಮರಾಜ್ಯವಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದರು.
ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಯವರು 2019ರ ಡಿಸೆಂಬರ್‌ನಲ್ಲಿ ಅಂಕಿತ ಹಾಕಿದ್ದರು. ಆದರೆ ಈ ಕಾನೂನು ವಿರೋಧಿಸಿ ದೇಶದ ಹಲವು ಕಡೆಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು. ಈ ಕಾಯ್ದೆಯು ತಾರತಮ್ಯದಿಂದ ಕೂಡಿದೆ ಎಂದು ಹಲವು ರಾಜಕೀಯ ಪಕ್ಷಗಳು ಆರೋಪಿಸಿದ್ದವು. ಕಾಯ್ದೆಗೆ ಸಂಬಂಧಿಸಿದ ನಿಯಮಗಳನ್ನು ಇದುವರೆಗೆ ಅಧಿಸೂಚನೆಯಲ್ಲಿ ಪ್ರಕಟಿಸಿರಲಿಲ್ಲ. ಹೀಗಾಗಿ ಕಾಯ್ದೆಯು ಜಾರಿಗೆ ಬಂದಿರಲಿಲ್ಲ.
‘ಪೌರತ್ವ (ತಿದ್ದುಪಡಿ) ನಿಯಮಗಳು–2024 ಹೆಸರಿನ ಈ ನಿಯಮಗಳು, ಸಿಎಎ–2019 ಕಾಯ್ದೆಯ ಪ್ರಕಾರ ಅರ್ಹರಾದವರಿಗೆ ಭಾರತೀಯ ಪೌರತ್ವ ನೀಡಲು ಅವಕಾಶ ಕಲ್ಪಿಸಲಿವೆ’ ಎಂದು ಕೇಂದ್ರ ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.