ADVERTISEMENT

ಕೋವ್ಯಾಕ್ಸಿನ್‌ ಲಸಿಕೆಯನ್ನು ಯಾರು ಪಡೆಯುವಂತಿಲ್ಲ; ಭಾರತ್ ಬಯೋಟೆಕ್ ಹೇಳಿದ್ದಿಷ್ಟು

ಪಿಟಿಐ
Published 19 ಜನವರಿ 2021, 8:14 IST
Last Updated 19 ಜನವರಿ 2021, 8:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹೈದರಾಬಾದ್‌: ಕೋವಿಡ್-19 ವಿರುದ್ಧ ಭಾರತವು ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಪ್ರಾರಂಭಿಸಿ ಎರಡು ದಿನಗಳಷ್ಟೇ ಕಳೆದಿದೆ. ಇದೀಗ ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್, ಯಾರೆಲ್ಲ ಕೋವ್ಯಾಕ್ಸಿನ್ ಲಸಿಕೆಯನ್ನು ತೆಗೆದುಕೊಳ್ಳಬಾರದು ಎಂಬುದರ ಕುರಿತು ಫ್ಯಾಕ್ಟ್ ಶೀಟ್‌ನಲ್ಲಿ ಎಚ್ಚರಿಕೆ ನೀಡಿದೆ.

ಕೋವಾಕ್ಸಿನ್‌ನ ಫ್ಯಾಕ್ಟ್ ಶೀಟ್‌ ಅನ್ನು ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ್ದು, ಲಸಿಕೆಯ ಕ್ಲಿನಿಕಲ್ ಪರಿಣಾಮವು ಇನ್ನೂ ಲಭ್ಯವಾಗಿಲ್ಲ ಮತ್ತು ಅದನ್ನು 3ನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ ಅಧ್ಯಯನ ಮಾಡಲಾಗುತ್ತಿದೆ. ಆದ್ದರಿಂದ ಲಸಿಕೆ ಪಡೆಯುವುದರಿಂದ ಕೋವಿಡ್-19ಗೆ ಸಂಬಂಧಿಸಿದ ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗಿಲ್ಲ ಎಂದರ್ಥವಲ್ಲ ಎಂದು ಹೇಳಿದೆ.

ದೇಶದಲ್ಲಿ ಈವರೆಗೆ ಲಸಿಕೆ ಪಡೆದ ನಂತರ 580 ಜನರಲ್ಲಿ ವ್ಯತಿರಿಕ್ತ ಪರಿಣಾಮಗಳು ಕಾಣಿಸಿಕೊಂಡಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. ಈ ಪೈಕಿ 7 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ ಇಬ್ಬರು ಕರ್ನಾಟಕದವರು.

ADVERTISEMENT

ಯಾರೆಲ್ಲ ಲಸಿಕೆ ತೆಗೆದುಕೊಳ್ಳಬಾರದು?

1. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ಅಥವಾ ಇಮ್ಯುನಿಟಿ ಮೇಲೆ ಪರಿಣಾಮ ಬೀರುವ ಔಷಧಗಳನ್ನು ತೆಗೆದುಕೊಳ್ಳುತ್ತಿರುವವರು ಕೋವ್ಯಾಕ್ಸಿನ್ ಲಸಿಕೆಯನ್ನು ತೆಗೆದುಕೊಳ್ಳಬಾರದು.

2. ಅಲರ್ಜಿಯನ್ನು ಹೊಂದಿರುವವರು, ಜ್ವರ ಇರುವವರು, ರಕ್ತಸ್ರಾವದ ಕಾಯಿಲೆ ಇರುವವರು ಅಥವಾ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಚಿಕಿತ್ಸೆ ಪಡೆಯುತ್ತಿರುವವರು ಕೂಡ ಲಸಿಕೆ ಪಡೆಯುವಂತಿಲ್ಲ.

3. ಗರ್ಭಿಣಿ ಮತ್ತು ಸ್ತನ್ಯಪಾನ ಮಾಡಿಸುವ ಮಹಿಳೆಯರು ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಕೋವ್ಯಾಕ್ಸಿನ್ ನೀಡಬಾರದು.

4. ಈಗಾಗಲೇ ಮತ್ತೊಂದು ಕೋವಿಡ್-19 ಲಸಿಕೆ ಪಡೆದವರಿಗೆ ಸಹ ಕೋವ್ಯಾಕ್ಸಿನ್ ಲಸಿಕೆಯನ್ನು ನೀಡಬಾರದು.

ಉಸಿರಾಟದಲ್ಲಿ ತೊಂದರೆ, ಮುಖ ಮತ್ತು ಗಂಟಲಿನ ಊತ, ವೇಗವಾದ ಹೃದಯ ಬಡಿತ, ದೇಹದಾದ್ಯಂತ ದದ್ದುಗಳು, ತಲೆತಿರುಗುವಿಕೆ ಮತ್ತು ಆಯಾಸ ಸೇರಿದಂತೆ ಹಲವಾರು ರೀತಿ ಅಲರ್ಜಿಯನ್ನು ಹೊಂದಿರುವವರು ಯಾವುದೇ ಕಾರಣಕ್ಕೂ ಲಸಿಕೆ ತೆಗೆದುಕೊಳ್ಳದಂತೆ ಭಾರತ್ ಬಯೋಟೆಕ್ ಎಚ್ಚರಿಸಿದೆ.

ಕೋವ್ಯಾಕ್ಸಿನ್ ಲಸಿಕೆ ಪಡೆಯುವವರು ತಮ್ಮ ವೈದ್ಯಕೀಯ ಸ್ಥಿತಿಗತಿ, ಅವರು ತೆಗೆದುಕೊಳ್ಳುತ್ತಿರುವ ಔಷಧಿಗಳು ಮತ್ತು ಅಲರ್ಜಿಯನ್ನು ಬಹಿರಂಗಪಡಿಸುವಂತೆ ಅದು ಒತ್ತಾಯಿಸಿದೆ.

ಫ್ಯಾಕ್ಟ್ ಶೀಟ್ ಪ್ರಕಾರ, ಲಸಿಕೆಯನ್ನು ಪಡೆದವರಲ್ಲಿ ನೋವು, ಚುಚ್ಚುಮದ್ದು ಪಡೆದ ಜಾಗದಲ್ಲಿ ಊತ ಅಥವಾ ತುರಿಕೆ, ದೇಹದ ನೋವು, ತಲೆನೋವು, ಜ್ವರ, ಅಸ್ವಸ್ಥತೆ, ಆಯಾಸ, ದದ್ದುಗಳು, ವಾಕರಿಕೆ ಮತ್ತು ವಾಂತಿ ಸೇರಿದಂತೆ ಅಡ್ಡಪರಿಣಾಮಗಳು ಉಂಟಾಗುತ್ತವೆ.

ಕೊವಾಕ್ಸಿನ್ ತೆಗೆದುಕೊಳ್ಳುವುದರಿಂದ ತೀವ್ರವಾದ ಅಲರ್ಜಿಯನ್ನು ಉಂಟುಮಾಡುವ ಅತಿ ವಿರಳ ಅವಕಾಶವಿದೆ. ಈ ಕಾರಣಕ್ಕಾಗಿಯೇ, ವ್ಯಾಕ್ಸಿನೇಷನ್ ನಂತರ ಮೇಲ್ವಿಚಾರಣೆಗಾಗಿ ನೀವು ಲಸಿಕೆ ಪಡೆದ ಸ್ಥಳದಲ್ಲಿ ಪ್ರತಿ ವ್ಯಾಕ್ಸಿನೇಷನ್ ನಂತರ 30 ನಿಮಿಷ ಅಲ್ಲಿಯೇ ಉಳಿಯಲು ನಿಮಗೆ ವ್ಯಾಕ್ಸಿನೇಷನ್ ಮಾಡಿದವರು ಕೇಳುತ್ತಾರೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.