ADVERTISEMENT

ಇಂಧನ ದರ ಮತ್ತೆ ಹೆಚ್ಚಳ: ಪೆಟ್ರೋಲ್‌ ಲೀಟರಿಗೆ 25 ಪೈಸೆ, ಡೀಸೆಲ್‌ 30 ಪೈಸೆ ಏರಿಕೆ

ಪಿಟಿಐ
Published 3 ಅಕ್ಟೋಬರ್ 2021, 7:13 IST
Last Updated 3 ಅಕ್ಟೋಬರ್ 2021, 7:13 IST
.
.   

ನವದೆಹಲಿ: ದೇಶದಾದ್ಯಂತ ಇಂಧನ ದರ ಭಾನುವಾರವೂ ಹೆಚ್ಚಳವಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಭಾನುವಾರ ಪೆಟ್ರೋಲ್‌ ದರವನ್ನು ಲೀಟರಿಗೆ 25 ಪೈಸೆ ಮತ್ತು ಡೀಸೆಲ್‌ ದರವನ್ನು ಲೀಟರಿಗೆ 30 ಪೈಸೆ ಹೆಚ್ಚಿಸಿವೆ.

ದೆಹಲಿಯಲ್ಲಿ ಪೆಟ್ರೋಲ್‌ ದರ ₹ 102.39ರ ಮಟ್ಟಕ್ಕೆ ಏರಿಕೆ ಆಗಿದೆ. ಡೀಸೆಲ್‌ ದರ ₹ 90.77ಕ್ಕೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್‌ ದರ ₹ 108.43 ಮತ್ತು ಡೀಸೆಲ್‌ ದರ ₹ 98.48ಕ್ಕೆ ಏರಿಕೆ ಆಗಿದೆ.

ಸ್ಥಳೀಯ ಮಾರಾಟ ತೆರಿಗೆಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ದರದಲ್ಲಿ ಬದಲಾವಣೆ ಆಗುತ್ತವೆ.

ADVERTISEMENT

ವಾರದಲ್ಲಿ ಐದನೇ ಬಾರಿ ಪೆಟ್ರೋಲ್ ದರ ಹೆಚ್ಚಳವಾಗಿದ್ದರಿಂದ ಪ್ರಮುಖ ನಗರಗಳಲ್ಲಿ ಲೀಟರಿಗೆ ₹100ಕ್ಕಿಂತ ಹೆಚ್ಚಿನ ಮಟ್ಟಕ್ಕೆ ಏರಿಕೆ ಆಗಿದೆ.

ಅಂತೆಯೇ ಡೀಸೆಲ್‌ ದರವು ಹತ್ತು ದಿನಗಳಲ್ಲಿ ಎಂಟು ಬಾರಿ ಹೆಚ್ಚಳವಾಗಿದ್ದು ಮಧ್ಯ ಪ್ರದೇಶ, ರಾಜಸ್ಥಾನ, ಒಡಿಶಾ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಲೀಟರಿಗೆ ₹ 100ನ್ನು ದಾಟಿದೆ.

‘ಜಗತ್ತಿನಾದ್ಯಂತ ತೈಲ ಬೆಲೆ ಹೆಚ್ಚಳವಾಗುತ್ತಿದೆ. ಇತರ ದೇಶಗಳಿಗೆ ಹೋಲಿಸಿದರೆ ನಾವು ಪರಿಸ್ಥಿತಿಯನ್ನು ಉತ್ತಮವಾಗಿಯೇ ನಿರ್ವಹಿಸುತ್ತಿದ್ದೇವೆ. ತೈಲ ಬೆಲೆ ಹೆಚ್ಚಳದಿಂದಾಗಿ ಬ್ರಿಟನ್‌ನಂತಹ ಕೆಲ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಪೆಟ್ರೋಲ್‌ ಪಂಪ್‌ಗಳು ಒಣಗುವುದನ್ನು ಗಮನಿಸಿದ್ದೇವೆ. ಆದರೆ ಭಾರತದಲ್ಲಿ ಅಂಥ ಪರಿಸ್ಥಿತಿ ಇಲ್ಲ. ನಮ್ಮ ತೈಲ ಕಂಪನಿಗಳು ತಡೆರಹಿತ ಪೂರೈಕೆಯನ್ನು ಖಾತ್ರಿಪಡಿಸುತ್ತಿವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.