ADVERTISEMENT

ಅಸ್ಸಾಂನಲ್ಲಿ ಪೆಟ್ರೋಲ್, ಡೀಸೆಲ್ ದರ ₹5 ಇಳಿಕೆ; ಇಂದು ಮಧ್ಯರಾತ್ರಿಯಿಂದಲೇ ಅನ್ವಯ

ಪಿಟಿಐ
Published 12 ಫೆಬ್ರುವರಿ 2021, 17:04 IST
Last Updated 12 ಫೆಬ್ರುವರಿ 2021, 17:04 IST
ಪೆಟ್ರೋಲ್‌ ಪಂಪ್‌ ಒಂದರಲ್ಲಿ ಕಾರಿಗೆ ಇಂಧನ ಹಾಕುತ್ತಿರುವ ಸಿಬ್ಬಂದಿ–ಸಾಂದರ್ಭಿಕ ಚಿತ್ರ
ಪೆಟ್ರೋಲ್‌ ಪಂಪ್‌ ಒಂದರಲ್ಲಿ ಕಾರಿಗೆ ಇಂಧನ ಹಾಕುತ್ತಿರುವ ಸಿಬ್ಬಂದಿ–ಸಾಂದರ್ಭಿಕ ಚಿತ್ರ   

ಗುವಾಹಟಿ: ಮುಂಬರಲಿರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿರಿಸಿ ಅಸ್ಸಾಂ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಹೆಚ್ಚುವರಿ ಸೆಸ್‌ ಹಿಂಪಡೆದಿದ್ದು, ಪ್ರತಿ ಲೀಟರ್‌ ಇಂಧನ ಬೆಲೆ ₹5 ಅಗ್ಗವಾಗಲಿದೆ.

ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ ಶುಕ್ರವಾರ ಅಸ್ಸಾಂ ವಿಧಾನಸಭೆಯಲ್ಲಿ ₹60,784.03 ಕೋಟಿ ಲೇಖಾನುದಾನ ಮಂಡಿಸಿದರು. ಮದ್ಯದ ಮೇಲಿನ ಶೇ 25ರಷ್ಟು ಹೆಚ್ಚುವರಿ ಸೆಸ್‌ ತೆಗೆದುಹಾಕುವುದಾಗಿಯೂ ಪ್ರಸ್ತಾಪಿಸಿದರು.

'ಮಾನ್ಯ ಸ್ಪೀಕರ್‌, ಕೋವಿಡ್‌–19 ಪ್ರಕರಣಗಳು ಹೆಚ್ಚಿದ ಸಂದರ್ಭದಲ್ಲಿ ಪೆಟ್ರೋಲ್‌, ಡೀಸೆಲ್‌ ಹಾಗೂ ಮದ್ಯದ ಮೇಲೆ ಹೆಚ್ಚುವರಿ ಕರ ವಿಧಿಸಲಾಗಿತ್ತು. ಈಗ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ...ಈ ಹೆಚ್ಚುವರಿ ಸೆಸ್ ಕಡಿತಗೊಳಿಸುವ ಪ್ರಸ್ತಾವನೆಗೆ ಸಂಪುಟದ ಸಚಿವರು ಸಮ್ಮತಿಸಿರುವುದಕ್ಕೆ ಆಭಾರಿಯಾಗಿದ್ದೇನೆ. ಇದರಿಂದಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ ₹5ರಷ್ಟು ಕಡಿಮೆಯಾಗಲಿದ್ದು, ಇಂದು ಮಧ್ಯರಾತ್ರಿಯಿಂದಲೇ ಅನ್ವಯವಾಗಲಿದೆ. ಈ ಮೂಲಕ ಅಸ್ಸಾಂನಲ್ಲಿ ಲಕ್ಷಾಂತರ ಗ್ರಾಹಕರಿಗೆ ಅನುಕೂಲವಾಗಲಿದೆ' ಎಂದು ಹಿಮಂತ ಬಿಸ್ವಾ ಭಾಷಣದಲ್ಲಿ ಹೇಳಿದರು.

ADVERTISEMENT

ಮುಂದಿನ ಹಣಕಾಸು ವರ್ಷದ ಆರು ತಿಂಗಳಿಗಾಗಿ ₹60,784.03 ಕೋಟಿ ಲೇಖಾನುದಾನ ಮಂಡಿಸಲಾಗಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಎಸ್‌ಡಿಪಿ) 2016–17ರಿಂದ 2019–20ರ ವರೆಗೂ ₹2,02,080.85 ಕೋಟಿಯಿಂದ ₹2,48,796.15 ಕೋಟಿಗೆ ಹೆಚ್ಚಳವಾಗಿದೆ. ವಾರ್ಷಿಕ ಆರ್ಥಿಕ ವೃದ್ಧಿ ದರವು ಶೇ 7.71ರಷ್ಟು ದಾಖಲಾಗಿದೆ.

ಅಸ್ಸಾಂನ ತಲಾ ಆದಾಯವು 2019–20ರಲ್ಲಿ ₹90,692ರಷ್ಟಾಗಿದೆ.

126 ಸ್ಥಾನಗಳ ಅಸ್ಸಾಂ ವಿಧಾನಸಭೆಗೆ ಮಾರ್ಚ್‌–ಏಪ್ರಿಲ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.