ಎನ್ಐಎ
(ಪಿಟಿಐ ಸಂಗ್ರಹ ಚಿತ್ರ)
ಕೊಚ್ಚಿ: ಕೇರಳದ ಜಿಲ್ಲಾ ಕೋರ್ಟ್ ನ್ಯಾಯಾಧೀಶ ಸೇರಿದಂತೆ 972 ಮಂದಿ ನಿಷೇಧಿತ ಸಂಘಟನೆ 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ'ದ (ಪಿಎಫ್‌ಐ) ಹಿಟ್‌ಲಿಸ್ಟ್‌ನಲ್ಲಿದ್ದರು ಎಂಬುದು, ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಇತ್ತೀಚೆಗೆ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಿಂದ ತಿಳಿದುಬಂದಿದೆ.
'ವರದಿಗಾರರ ವಿಭಾಗ', 'ಮಾನಸಿಕ ಮತ್ತು ಶಸ್ತ್ರಾಸ್ತ್ರ ತರಬೇತಿ ವಿಭಾಗ' ಹಾಗೂ 'ಸೇವಾ ವಿಭಾಗ/ದಾಳಿ ತಂಡಗಳು' ಎಂಬ ಮೂರು ವಿಭಾಗಗಗಳನ್ನು ಪಿಎಫ್‌ಐ ಹೊಂದಿತ್ತು. ಹಿಟ್‌ಲಿಸ್ಟ್‌ನಲ್ಲಿರುವವರಿಗೆ ಸಂಬಂಧಿಸಿದ ಮಾಹಿತಿಯನ್ನು 'ವರದಿಗಾರರ ವಿಭಾಗ'ದ ಮೂಲಕ ಕಲೆಹಾಕಿತ್ತು ಎಂದು ಎನ್‌ಐಎ ಹೇಳಿದೆ.
ಸಮಾಜದ ಬೇರೆ ಬೇರೆ ಸಮುದಾಯದ ಪ್ರಮುಖ ವ್ಯಕ್ತಿಗಳು ಅದರಲ್ಲೂ ಹಿಂದೂ ಸಮುದಾಯಕ್ಕೆ ಸೇರಿದವರ ದಿನಚರಿ ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ಗುಪ್ತಚರ ಪಡೆಯಂತೆ ಕಾರ್ಯನಿರ್ವಹಿಸುತ್ತಿದ್ದ 'ವರದಿಗಾರರ ವಿಭಾಗ'ದ ಮೂಲಕ ಪಿಎಫ್‌ಐ ಕಲೆಹಾಕಿತ್ತು ಎಂದಿದೆ.
2022ರಲ್ಲಿ ನಡೆದ ಕೆ.ಶ್ರೀನಿವಾಸನ್ ಅವರ ಕೊಲೆ ಪ್ರಕರಣದ ಆರೋಪಿಗಳು ಜಾಮೀನು ಅರ್ಜಿ ವಜಾ ಗೊಳಿಸಿರುವ ಎನ್‌ಐಎ ವಿಶೇಷ ನ್ಯಾಯಾಲಯದ ಆದೇಶದಲ್ಲಿಯೂ, ಈ ವರದಿಯಲ್ಲಿನ ಅಂಶಗಳನ್ನು ಉಲ್ಲೇಖಿಸಲಾಗಿದೆ.
ಆರ್‌ಎಸ್‌ಎಸ್ ನಾಯಕ ಶ್ರೀನಿವಾಸನ್ ಅವರನ್ನು ಅವರ ಅಂಗಡಿಯಲ್ಲೇ 2022ರ ಏಪ್ರಿಲ್ 16ರಂದು ಕೊಲೆ ಮಾಡಲಾಗಿತ್ತು. ಇದರ ಹಿಂದೆ ಪಿಎಫ್‌ಐ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು.
ಶ್ರೀನಿವಾಸನ್ ಹತ್ಯೆ ಆರೋಪಿಗಳಿಗೆ ಜಾಮೀನು ನೀಡದಂತೆ ಕೋರಿರುವ ಎನ್‌ಐಎ, ವಿವಿಧ ಆರೋಪಿಗಳಿಂದ ವಶಕ್ಕೆ ಪಡೆದಿರುವ ದಾಖಲೆಗಳಿಗೂ ಪಿಎಫ್‌ಐ ಹಿಟ್‌ಲಿಸ್ಟ್‌ನಲ್ಲಿರುವ 972 ವ್ಯಕ್ತಿಗಳ ಕುರಿತ ಮಾಹಿತಿಗೂ ಸಂಬಂಧವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.
ಪಿಎಫ್‌ಐ ಅನ್ನು ಕೇಂದ್ರ ಸರ್ಕಾರವು 2022ರ ಸೆಪ್ಟೆಂಬರ್‌ನಲ್ಲಿ ನಿಷೇಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.