ADVERTISEMENT

ನಿಷೇಧವಿದ್ದರೂ ವೈದ್ಯರಿಗೆ ಉಡುಗೊರೆ

ಔಷಧ ಮಾರಾಟ ಉತ್ತೇಜನಕ್ಕಾಗಿ ವೆಚ್ಚ: ಆದಾಯ ತೆರಿಗೆ ವಿನಾಯಿತಿ ಕೇಳಿರುವ ಔಷಧ ಕಂಪನಿಗಳು

ಕಲ್ಯಾಣ್‌ ರೇ
Published 21 ಫೆಬ್ರುವರಿ 2020, 21:31 IST
Last Updated 21 ಫೆಬ್ರುವರಿ 2020, 21:31 IST
ಮಾತ್ರೆಗಳು
ಮಾತ್ರೆಗಳು   

ನವದೆಹಲಿ: ಭಾರತದಲ್ಲಿ ಔಷಧಗಳ ಮಾರಾಟವನ್ನು ಉತ್ತೇಜಿಸಲು ಔಷಧ ತಯಾರಿಕೆ ಕಂಪನಿಗಳು, ವೈದ್ಯರಿಗೆ ಉಡುಗೊರೆ ಮತ್ತು ಹಣ ನೀಡುವುದಕ್ಕೆ ನಿಷೇಧವಿದೆ. ಆದರೆ, 2019–20ನೇ ಸಾಲಿನಲ್ಲಿ 8,667 ಕಂಪನಿಗಳು ‘ವೈದ್ಯರಿಗೆ ಉಡುಗೊರೆ’ ಮತ್ತು ‘ಔಷಧ ಮಾರಾಟ ಉತ್ತೇಜನ ವೆಚ್ಚ’ ಮಾಡಿರುವುದಾಗಿ ಘೋಷಿಸಿಕೊಂಡಿವೆ. ಹಾಗೂ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಈ ವೆಚ್ಚವನ್ನು ನಮೂದಿಸಿವೆ.

ಔಷಧ ತಯಾರಿಕೆ ಕಂಪನಿಯೊಂದು ಈ ವೆಚ್ಚದ ಅಡಿ ಆದಾಯ ತೆರಿಗೆ ವಿನಾಯಿತಿ ಕೋರಿದ್ದಕ್ಕೆ ಸಂಬಂಧಿಸಿದ ವ್ಯಾಜ್ಯದ ವಿಚಾರಣೆ ವೇಳೆ ಮದ್ರಾಸ್‌ ಹೈಕೋರ್ಟ್‌ನಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಆದಾಯ ತೆರಿಗೆ ಇಲಾಖೆಯು ಹೈಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಈ ಮಾಹಿತಿ ಇದೆ.

ಈ ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್ ಪೀಠವು ಜನವರಿಯಲ್ಲೇ ಕೇಂದ್ರ ಆರೋಗ್ಯ ಮತ್ತು ರಸಗೊಬ್ಬರ ಸಚಿವಾಲಯಗಳು, ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ ಮತ್ತು ಭಾರತೀಯ ವೈದ್ಯಕೀಯ ಮಂಡಳಿಗೆ ನೋಟಿಸ್ ನೀಡಿತ್ತು. ಹೀಗಾಗಿ ಆದಾಯ ತೆರಿಗೆ ಇಲಾಖೆ ಈ ವರದಿಯನ್ನು ನೀಡಿತ್ತು.

ADVERTISEMENT

‘ಉಡುಗೊರೆ ನೀಡುವುದು ನಿಷೇಧವಿದ್ದರೂ, ಔಷಧ ತಯಾರಿಕೆ ಕಂಪನಿಗಳು ಈ ಪರಿಪಾಟವನ್ನು ಮುಂದುವರಿಸಿಕೊಂಡು ಬರುತ್ತಿವೆ. ತಮ್ಮ ಉತ್ಪನ್ನಗಳ ಮಾರಾಟವನ್ನು ಉತ್ತೇಜಿಸಲು ವೈದ್ಯರಿಗೆ ಲಂಚ, ಉಡುಗೊರೆ ನೀಡುತ್ತಿವೆ ಎಂಬುದು ಈ ವರದಿಯಿಂದ ಸ್ಪಷ್ಟವಾಗಿದೆ’ ಎಂದು ಹೈಕೋರ್ಟ್‌ ಹೇಳಿದೆ.

‘ಪುಣೆ ಮೂಲದ ‘ಸಾಥಿ’ ಎಂಬ ಸ್ವಯಂಸೇವಾ ಸಂಸ್ಥೆಯು ಈ ವಿಚಾರದ ಬಗ್ಗೆ ಸಮೀಕ್ಷೆ ನಡೆಸಿ, ವರದಿ ಸಿದ್ಧಪಡಿಸಿದೆ.ಕೆಲವು ದೊಡ್ಡ ಔಷಧ ತಯಾರಿಕೆ ಕಂಪನಿಗಳು ವೈದ್ಯರಿಗೆ ಸ್ಮಾರ್ಟ್‌ಫೋನ್‌, ಕ್ರೆಡಿಟ್‌ ಕಾರ್ಡ್ ವೋಚರ್‌ಗಳನ್ನು ಕೊಡುತ್ತವೆ. ಕೆಲವು ಬಾರಿ ಹುಡುಗಿಯರನ್ನು ಒದಗಿಸುವ ಕೆಲಸವನ್ನೂ ಮಾಡುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ’ ಎಂದು ಹೈಕೋರ್ಟ್‌ ಹೇಳಿದೆ.

ಎರಡು ನಿಯಮಾವಳಿಗಳು
‘2009ರ ವೈದ್ಯಕೀಯ ಮಂಡಳಿ (ವೃತ್ತಿಪರತೆ, ಸಭ್ಯತೆ ಮತ್ತು ನೈತಿಕತೆ) ನಿಯಮಾವಳಿ’ ಅಡಿ ಔಷಧಗಳ ಮಾರಾಟವನ್ನು ಉತ್ತೇಜಿಸಲು ವೈದ್ಯರಿಗೆ ಉಡುಗೊರೆ ಮತ್ತು ಲಂಚ ನೀಡುವುದನ್ನು ನಿಷೇಧಿಸಲಾಗಿದೆ. ವೈದ್ಯರು ₹ 1,000 ಮತ್ತು ಅದಕ್ಕಿಂತ ಹೆಚ್ಚು ಮೊತ್ತದ ನಗದು, ಉಡುಗೊರೆಗಳು, ತಮ್ಮ ಮತ್ತು ತಮ್ಮ ಕುಟುಂಬದವರ ಪ್ರವಾಸ ವೆಚ್ಚವನ್ನು ಔಷಧ ಕಂಪನಿಗಳಿಂದ ಪಡೆಯಬಾರದು ಎಂದು ಈ ನಿಯಮಾವಳಿಗಳು ಹೇಳುತ್ತವೆ.

ಔಷಧ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಉತ್ತೇಜಿಸುವ ಸಲುವಾಗಿ ವೈದ್ಯರಿಗೆ ಉಡುಗೊರೆ ಮತ್ತು ಲಂಚ ನೀಡುವುದನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ, ಔಷಧ ವಿಭಾಗವು ನಿಷೇಧಿಸಿ 2015ರಲ್ಲಿ ನಿಯಮಾವಳಿಗಳನ್ನು ರೂಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.