ADVERTISEMENT

ಐಟಿ ನಿಯಮಕ್ಕೆ ತಿದ್ದುಪಡಿ: ಅಭಿಪ್ರಾಯ ಸಂಗ್ರಹಣೆ ಕಾಲಾವಕಾಶ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 16:10 IST
Last Updated 26 ಜನವರಿ 2023, 16:10 IST
ರಾಜೀವ್‌ ಚಂದ್ರಶೇಖರ್‌
ರಾಜೀವ್‌ ಚಂದ್ರಶೇಖರ್‌   

ನವದೆಹಲಿ: ಮಾಹಿತಿ ತಂತ್ರಜ್ಞಾನ (ಮಧ್ಯಂತರ ಮಾರ್ಗಸೂಚಿ ಮತ್ತು ಡಿಜಿಟಲ್‌ ಮಾಧ್ಯಮ ನೀತಿ ಸಂಹಿತೆ) ನಿಯಮ– 2021ಕ್ಕೆ ಕರಡು ತಿದ್ದುಪಡಿ ತರುವ ಕುರಿತು ಸಂಬಂಧಪಟ್ಟವರ ಅಭಿಪ್ರಾಯ ಕಲೆಹಾಕಲು ನಿಗದಿಪಡಿಸಲಾಗಿದ್ದ ಕಾಲಮಿತಿಯನ್ನು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಗುರುವಾರ ವಿಸ್ತರಿಸಿದೆ.

ಪ್ರೆಸ್‌ ಇನ್‌ಫರ್ಮೇಷನ್‌ ಬ್ಯೂರೊ (ಪಿಐಬಿ) ಸುಳ್ಳು ಸುದ್ದಿ (ಫೇಕ್‌ ನ್ಯೂಸ್‌) ಎಂದು ವರ್ಗೀಕರಿಸುವ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಬೇಕು ಎಂದು ಉದ್ದೇಶಿತ ತಿದ್ದುಪಡಿ ನಿಯಮ ಇದಾಗಿದೆ. ಈ ತಿದ್ದುಪಡಿ ನಿಯಮಕ್ಕೆ ಸಂಬಂಧಿಸಿ 2023ರ ಫೆಬ್ರುವರಿ 20ರ ವರೆಗೆ ಸಂಬಂಧಪಟ್ಟವರು ಅಭಿಪ್ರಾಯಗಳನ್ನು ನೀಡಬಹುದು ಎಂದು ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಇದಕ್ಕೂ ಮೊದಲು ಕಡೇ ದಿನಾಂಕವನ್ನು ಜನವರಿ 25ಕ್ಕೆ ನಿಗದಿಪಡಿಸಲಾಗಿತ್ತು.

ಈ ಕುರಿತು ಬುಧವಾರ ಮಾಹಿತಿ ನೀಡಿರುವ ಕೇಂದ್ರ ಎಲಿಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌, ಕೇಂದ್ರದ ಈ ಪ್ರಸ್ತಾವನೆಯು ಜಾರಿಯಾಗುವ ಮುನ್ನ ಮುಂದಿನ ತಿಂಗಳು ಸಂಬಂಧಪಟ್ಟವರ ಜೊತೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದರು.

ADVERTISEMENT

ಇಂಡಿಯನ್‌ ನ್ಯೂಸ್‌ ಪೇಪರ್‌ ಸೊಸೈಟಿ, ಎಡಿಟರ್ಸ್‌ ಗಿಲ್ಡ್‌ ಸೇರಿ ಹಲವಾರು ಪ್ರತಿಕಾ ಸಂಘಟನೆಗಳು ಕೇಂದ್ರ ಸರ್ಕಾರದ ಈ ಪ್ರಸ್ತಾವನೆಯನ್ನು ವಿರೋಧಿಸಿದ್ದವು. ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಉದ್ದೇಶದಿಂದ ಸರ್ಕಾರ ಈ ತಿದ್ದುಪಡಿ ನಿಯಮ ಜಾರಿಗೆ ತರಲು ಉದ್ದೇಶಿಸಿದೆ ಎಂದು ಆರೋಪಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.