ತಿರುವನಂತಪುರ: ‘ದಿ ಕೇರಳ ಸ್ಟೋರಿ’ ಚಲನಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ನೀಡಿರುವುದನ್ನು ಟೀಕಿಸಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ಇದು ದೇಶದ ಸೌಹಾರ್ದ ಕದಡುವಂತಹ ಸಿನಿಮಾಗೆ ಮನ್ನಣೆ ನೀಡಿದಂತಾಗಿದೆ’ ಎಂದಿದ್ದಾರೆ.
‘ರಾಷ್ಟ್ರ ಪ್ರಶಸ್ತಿ ಸಮಿತಿಯ ತೀರ್ಪುಗಾರರು ದೇಶದ ಏಕತೆಯನ್ನು ಕದಡುವ ಹೂರಣ ಇರುವ ಇಂತಹ ಸಿನಿಮಾಗೆ ಪ್ರಶಸ್ತಿ ನೀಡುವ ಮೂಲಕ ಕೇರಳದ ಕಮ್ಯುನಿಸಂ ಅನ್ನು ಗುರಿಯಾಗಿಸಿಕೊಂಡ ಧೋರಣೆಯನ್ನು ಸಮರ್ಥಿಸಿದ್ದಾರೆ’ ಎಂದು ವಿಜಯನ್ ಅವರು ಶನಿವಾರ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೇರಳ ಸಂಸ್ಕೃತಿ ಸಚಿವ ಸಜಿ ಚೆರಿಯನ್, ‘ಇದು ಸಂಘ ಪರಿವಾರದ ರಾಜಕೀಯ ಕಾರ್ಯಸೂಚಿ’ ಎಂದು ಆರೋಪಿಸಿದ್ದಾರೆ.
ಈ ಚಿತ್ರವು ವಿಭಜನೆಯನ್ನು ಉತ್ತೇಜಿಸುತ್ತದೆ. ಸಮಾಜದಲ್ಲಿ ದ್ವೇಷವನ್ನು ಹರಡುತ್ತದೆ ಮತ್ತು ಕೇರಳದ ಜನರನ್ನು ಅವಮಾನಿಸುತ್ತದೆ ಎಂದಿದ್ದಾರೆ.
‘ನಮ್ಮ ನಟಿ–ನಟರಾದ ಊರ್ವಶಿ ಹಾಗೂ ವಿಜಯರಾಘವನ್ ಅವರು ಪ್ರಶಸ್ತಿ ಸ್ವೀಕರಿಸುವುದು ಹೆಮ್ಮೆಯ ಸಂಗತಿ. ಆದರೆ, ಅವರ ಜೊತೆಯಲ್ಲಿ ‘ಕೇರಳ ಸ್ಟೋರಿ’ ಚಿತ್ರವನ್ನು ಹೇಗೆ ಗುರುತಿಸುವುದು? ಯಾವ ಆಧಾರದ ಮೇಲೆ ಪ್ರಶಸ್ತಿ ನೀಡುವ ಈ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.
ದೇಶದಲ್ಲಿ ಸಂಘ ಪರಿವಾರದ ರಾಜಕೀಯವು ಭಯ ಹುಟ್ಟಿಸುತ್ತಿದೆ. ದ್ವೇಷವನ್ನು ಹರಡಲು ಆಡಳಿತ ಪಕ್ಷವು ಸಣ್ಣ ಅವಕಾಶವನ್ನೂ ಬಳಸಿಕೊಳ್ಳುತ್ತಿದೆ. ಅದರ ಒಂದು ಭಾಗವೇ ಈ ಪ್ರಶಸ್ತಿ ಎಂದು ಆರೋಪಿಸಿದ್ದಾರೆ.
ತೀರ್ಪುಗಾರರ ನಿರ್ಧಾರವನ್ನು ಕೇರಳ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಅವರೂ ಟೀಕಿಸಿದ್ದು, ‘ದಿ ಕೇರಳ ಸ್ಟೋರಿಯು ರಾಜ್ಯದ ವಿರುದ್ಧ ಸುಳ್ಳು ಅಭಿಯಾನ’ ಎಂದು ಕರೆದಿದ್ದಾರೆ.
ಕೇರಳವು ಲವ್ ಜಿಹಾದ್‌ನ ಕೇಂದ್ರವಾಗಿದೆ. ಅವರ ಧರ್ಮಕ್ಕೆ ಮತಾಂತರಗೊಳಿಸಲು ಸಿರಿಯಾಕ್ಕೆ ಕರೆದೊಯ್ಯಲಾಗುತ್ತದೆ ಎಂದು ಈ ಸಿನಿಮಾ ಕಥೆ ಹೇಳುತ್ತದೆ. ಕೇರಳದ ಜನರು ಇದನ್ನು ನಂಬುವುದಿಲ್ಲ. ಆದರೆ, ಹೊರ ರಾಜ್ಯ ಹಾಗೂ ವಿದೇಶದ ಜನರಿಗೆ ಸತ್ಯ ಗೊತ್ತಿರುವುದಿಲ್ಲ ಎಂದಿದ್ದಾರೆ.
2023ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ತೀರ್ಪುಗಾರರ ಮಂಡಳಿಯ ಅಧ್ಯಕ್ಷ, ಚಲನಚಿತ್ರ ನಿರ್ಮಾಪಕ ಅಶುತೋಷ್ ಗೋವಾರಿಕರ್ ಅವರು ದೆಹಲಿಯಲ್ಲಿ ಶುಕ್ರವಾರ ಘೋಷಿಸಿದ್ದರು.
‘ದಿ ಕೇರಳ ಸ್ಟೋರಿ’ ಚಿತ್ರಕ್ಕಾಗಿ ಸುದಿಪ್ತೋ ಸೇನ್ ಅವರಿಗೆ ‘ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ’ ದೊರೆತಿದೆ. ಇದೇ ಚಿತ್ರಕ್ಕೆ ‘ಅತ್ಯುತ್ತಮ ಛಾಯಾಚಿತ್ರಗ್ರಹಣ ಪ್ರಶಸ್ತಿ’ಯೂ ಸಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.