ADVERTISEMENT

ರಾತ್ರಿ 1 ಗಂಟೆಗೆ ಕರೆ ಮಾಡಿ ಸಹಾಯಯಾಚಿಸಿದ ಟೆಕಿಗಳಿಗೆ ನೆರವು ನೀಡಿದ ಕೇರಳ ಸಿಎಂ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 14:00 IST
Last Updated 26 ಮಾರ್ಚ್ 2020, 14:00 IST
ಪಿಣರಾಯಿ ವಿಜಯನ್
ಪಿಣರಾಯಿ ವಿಜಯನ್   

ವಯನಾಡ್: ಹೈದರಾಬಾದ್‌ನಿಂದ ಕೇರಳಕ್ಕೆ ಹೊರಟಿದ್ದ ಟೆಕಿಗಳು ಈಗ ಸುರಕ್ಷಿತವಾಗಿ ಮನೆ ಸೇರಿದ್ದಾರೆ. ಲಾಕ್‌ಡೌನ್‌ನಿಂದಾಗಿ ಬುಧವಾರ ರಾತ್ರಿ ಕೇರಳ-ಕರ್ನಾಟಕ ಗಡಿಯಲ್ಲಿ ಸಿಕ್ಕಿಹಾಕಿಕೊಂಡು ಎಲ್ಲಿ ಹೋಗಬೇಕೆಂದು ತಿಳಿಯದೆ ಒದ್ದಾಡುತ್ತಿರುವಾಗ ಆ ಟೆಕಿಗಳು ಕರೆ ಮಾಡಿದ್ದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ. ಆಗ ಸಮಯ ರಾತ್ರಿ 1 ಗಂಟೆ. ಕರೆ ಸ್ವೀಕರಿಸಿದ ವಿಜಯನ್ ಹೇಳಿದ್ದುಚಿಂತೆ ಮಾಡಬೇಡಿ ಮಕ್ಕಳೇ, ಸಮಸ್ಯೆ ಪರಿಹರಿಸಲು ನಾವು ಪ್ರಯತ್ನಿಸುತ್ತೇವೆ ಎಂದಾಗಿತ್ತು.

ಆದಿರಾ ಮತ್ತು ಅವರೊಂದಿಗೆ ಇತರ 13 ಮಂದಿ ಟಿಸಿಎಸ್ ಟೆಕಿಗಳು ಮಾರ್ಚ್ 25ರಂದು ಹೈದರಾಬಾದ್‌ನಿಂದ ಹೊರಟಿದ್ದರು. ಮುತ್ತಂಙ ವನ್ಯಜೀವಿ ಪ್ರದೇಶದ ಬಳಿ ಇರುವ ತೋಳ್ಪಟ್ಟಿ ರಸ್ತೆಯಾಗಿ ಅವರು ಬಂದಿದ್ದು, ಕೇರಳ- ಕರ್ನಾಟಕ ಗಡಿ ತಲುಪುವಾಗ ಹೊತ್ತು ಕತ್ತಲಾಗಿತ್ತು. ಅಲ್ಲಿಂದ ಹೇಗೆ ಹೋಗುವುದು ಎಂದು ತಿಳಿಯದೆ ಚಿಂತಿತರಾಗಿದ್ದಾಗ ಆದಿರಾ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮೊಬೈಲ್ ಸಂಖ್ಯೆಯನ್ನು ಗೂಗಲ್ ಮಾಡಿಕರೆಮಾಡಿದರು.

ನಾನು ಅವರ ಮೊಬೈಲ್‌ಗೆ ಕರೆ ಮಾಡಿದಾಗ ಎರಡು ರಿಂಗ್‌ ಆಗುವ ಹೊತ್ತಿಗೆ ಅವರು ಕರೆ ಸ್ವೀಕರಿಸಿದರು.ಆಗ ಸಮಯ 1 ಗಂಟೆ. ನಾನು ಅಲ್ಲಿನ ಪರಿಸ್ಥಿತಿ ಬಗ್ಗೆವಿವರಿಸಿದಾಗ, ಚಿಂತೆ ಮಾಡಬೇಡಿ ಎಂದು ಅವರು ಹೇಳಿದರು.

ADVERTISEMENT

ಟೆಂಪೊ ಟ್ರಾವೆಲರ್‌ನಲ್ಲಿ14 ಟೆಕಿಗಳ ಈ ತಂಡ ಹೈದರಾಬಾದ್‌ನಿಂದ ಹೊರಟಿತ್ತು.ತೆಲಂಗಾಣ- ಆಂಧ್ರಪ್ರದೇಶ ಗಡಿಯಲ್ಲಿ ಪೊಲೀಸರು ನಮ್ಮನ್ನು ತಡೆದರು. ಮಾರ್ಚ್ 24 ಮಧ್ಯರಾತ್ರಿಯಿಂದಲೇ ದೇಶವ್ಯಾಪಿ ದಿಗ್ಬಂಧನ ಜಾರಿಯಾಗಿದ್ದರಿಂದ ಎಲ್ಲ ಗಡಿಗಳನ್ನೂ ಮುಚ್ಚಲಾಗಿತ್ತು.

ತೆಲಂಗಾಣ- ಆಂಧ್ರ ಗಡಿಭಾಗದಲ್ಲಿ ಸುಮಾರು ನೂರು ಜನ ಕಾಯುತ್ತಿದ್ದರು.ಪೊಲೀಸರು ಗಡಿ ದಾಟಲು ಬಿಡುತ್ತಿರಲಿಲ್ಲ.ನೀವೂ ಹಿಂತಿರುಗಿ ಹೋಗಿ ಎಂದು ಅವರು ಹೇಳಿದರು. ಆದರೆ ಕೋಯಿಕ್ಕೋಡ್ ಉಪ ಜಿಲ್ಲಾಧಿಕಾರಿ ಮಧ್ಯಪ್ರವೇಶ ಮಾಡಿದ್ದರಿಂದ ಆ ಗಡಿ ದಾಟಲು ಸಾಧ್ಯವಾಯಿತು.

ಕೋಯಿಕ್ಕೋಡ್‌ವರೆಗೆ ಬಿಡುವ ಬದಲು ಗಡಿಭಾಗದಲ್ಲೇ ಬಿಡುತ್ತೇನೆ ಎಂದು ನಮ್ಮ ಟೆಂಪೊ ಚಾಲಕ ಹೇಳಿದ್ದರು. ಕೇರಳ- ಕರ್ನಾಟಕ ಗಡಿಭಾಗಕ್ಕೆ ತಲುಪಿ ಅಲ್ಲಿಂದ ನೆರವು ಪಡೆಯಲು ಪ್ರಯತ್ನಿಸಿದರೂ ಅದು ವಿಫಲವಾಯಿತು. ಅಂಥಾ ಹೊತ್ತಲ್ಲಿ ಮುಖ್ಯಮಂತ್ರಿಯವರಲ್ಲಿಯೇ ಸಹಾಯ ಕೇಳೋಣ ಎಂದು ಪಿಣರಾಯಿ ವಿಜಯನ್ ಅವರಿಗೆ ಕರೆ ಮಾಡಿದೆ. ಅವರು ಅಷ್ಟೊತ್ತಲ್ಲಿ ಕರೆ ಸ್ವೀಕರಿಸಿ ವಯನಾಡ್ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಯ ಮೊಬೈಲ್ ಸಂಖ್ಯೆ ನೀಡಿ, ಅವರಿಗೆ ಕರೆ ಮಾಡಿನಾನು ಅವರಿಗೆ ಹೇಳುತ್ತೇನೆ ಎಂದರು.

ನಾನು ವಯನಾಡ್ ಎಸ್‌ಪಿ ಅವರಿಗೆ ಕರೆಮಾಡಿದೆ. ಅವರು ತೋಳ್ಪಟ್ಟಿ ತಲುಪುವ ಹೊತ್ತಿಗೆ ತಿರುನೆಲ್ಲಿ ಸಬ್ ಇನ್ಸ್‌ಪೆಕ್ಟರ್ ವಾಹನದೊಂದಿಗೆ ಕಾಯುತ್ತಿದ್ದರು.

ನಮ್ಮ ದೇಹದ ಉಷ್ಣತೆ ಪರೀಕ್ಷಿಸಿ ಆಮೇಲೆ ಕೋಯಿಕ್ಕೋಡ್‌ಗೆ ಹೋಗಲು ಅನುಮತಿ ನೀಡಲಾಯಿತು. ಮನೆಗೆ ತಲುಪಿದ ನಂತರ ಪಿಣರಾಯಿ ವಿಜಯನ್‌ಗೆ ಕರೆ ಮಾಡಿ ಧನ್ಯವಾದ ಹೇಳಿದಾಗ,ನೀವೆಲ್ಲರೂ ಸುರಕ್ಷಿತವಾಗಿ ಮನೆ ತಲುಪಿದ್ದೀರಿ ಎಂಬುದು ಖುಷಿಯಾಯಿತು. ಮನೆಯಲ್ಲೇ ಇರಿ, ಹೊರಗೆ ಹೋಗಬೇಡಿ ಎಂದು ಅವರು ಹೇಳಿದರು ಅಂತಾರೆ ಆದಿರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.