ADVERTISEMENT

ಸಂಸತ್ತಿನಲ್ಲಿ ಪ್ರತಿಪಕ್ಷಗಳಿಂದ ಅತಿ ಕೆಟ್ಟ ನಡವಳಿಕೆ: ಪೀಯೂಶ್‌ ಗೋಯಲ್‌

ಪಿಟಿಐ
Published 15 ಆಗಸ್ಟ್ 2021, 11:48 IST
Last Updated 15 ಆಗಸ್ಟ್ 2021, 11:48 IST
ಪೀಯೂಶ್‌ ಗೋಯಲ್‌
ಪೀಯೂಶ್‌ ಗೋಯಲ್‌   

ನವದೆಹಲಿ (ಪಿಟಿಐ): ‘ವಿರೋಧಪಕ್ಷಗಳು ಸಂಸತ್ತಿನಲ್ಲಿ ಬಹುಶಃ ಎಷ್ಟು ಸಾಧ್ಯವೋ ಅಷ್ಟೂ ಕೆಟ್ಟದಾದ ನಡವಳಿಕೆಯನ್ನು ತೋರಿವೆ. ಪ್ರಜಾಪ್ರಭುತ್ವದ ಆಧಾರಸ್ತಂಭವನ್ನು ಹಾಳುಗೆಡವಲು ಬಹುಶಃ ಇನ್ನೇನನ್ನೂ ಉಳಿಸಿಲ್ಲ‘ ಎಂದು ಕೇಂದ್ರ ಸಚಿವ ಪೀಯೂಶ್‌ ಗೋಯಲ್‌ ಭಾನುವಾರ ಹರಿಹಾಯ್ದರು.

‘ಉಭಯ ಸದನಗಳಲ್ಲಿ ನೂತನ ಸಚಿವರನ್ನು ಪ್ರಧಾನಮಂತ್ರಿ ಪರಿಚಯಿಸುವುದು 70 ವರ್ಷದಿಂದ ಪಾಲಿಸುತ್ತ ಬಂದಿರುವ ಸಂಪ್ರದಾಯ. ಇದೇ ಮೊದಲ ಬಾರಿ ಪ್ರತಿಪಕ್ಷಗಳು ಅದಕ್ಕೂ ಅವಕಾಶ ನೀಡಲಿಲ್ಲ’ ಎಂದರು.

‘ಪ್ರಜಾಪ್ರಭುತ್ವವು ತನ್ನದೇ ಆದ ಗೌರವ, ಶ್ರೀಮಂತಿಕೆ ಇದೆ. ವಿರೋಧಪಕ್ಷಗಳ ಸ್ಪರ್ಧೆ ಮತ್ತು ಸ್ಪರ್ಧಾತ್ಮಕ ರಾಜಕಾರಣಕ್ಕಾಗಿ ಅದು ಬಲಿಯಾಯಿತು. ವಿರೋಧಪಕ್ಷಗಳು ಸಹನೆಯ ಎಲ್ಲ ಮಿತಿಗಳನ್ನೂ ಮೀರಿದವು’ ಎಂದು ಅವರು ಟೈಮ್ಸ್‌ ನೌ ವಾಹಿನಿ ಆಯೋಜಿಸಿದ್ದ ‘75: ಸ್ವಾತಂತ್ರ್ಯ ಶೃಂಗಸಭೆ’ಯಲ್ಲಿ ಮಾತನಾಡುತ್ತಾ ಹೇಳಿದರು.

ADVERTISEMENT

‘ವಿರೋಧ ಪಕ್ಷಗಳ ಇಂತಹ ಪ್ರವೃತ್ತಿಗೆ ಕಡಿವಾಣ ಅಗತ್ಯ. ಅದಕ್ಕಾಗಿಯೇ ನಾವು ಕ್ರಮಕ್ಕೆ ಒತ್ತಾಯಿಸಿದ್ದೇವೆ. ಕೇರಳ ವಿಧಾನಸಭೆಯ ಕಲಾಪಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಶಕ್ತಿಯುತ ತೀರ್ಪು ನೀಡಿದೆ. ಈ ಬಾರಿ ನಮ್ಮ ಕೆಲವು ಸದಸ್ಯರು ಕೋರ್ಟ್‌ನ ಕಟ್ಟುನಿಟ್ಟಿನ ಕ್ರಮ ಎದುರಿಸುವರು ಎಂದು ಭಾವಿಸುತ್ತೇನೆ’ ಎಂದು ಗೋಯಲ್ ತಿಳಿಸಿದರು.

ಆಗಸ್ಟ್ 13ರವರೆಗೆ ನಡೆಯಬೇಕಿದ್ದ ಲೋಕಸಭೆ ಕಲಾಪವನ್ನು ಪೆಗಾಸಸ್‌ ಗೂಢಚರ್ಯೆಗೆ ಸಂಬಂಧಿಸಿ ಪ್ರತಿಪಕ್ಷಗಳು ನಡೆಸಿದ ಧರಣಿ, ಪ್ರತಿಭಟನೆಯಿಂದಾಗಿ ಆ.11ರಂದೇ ಕೊನೆಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.