ನವದೆಹಲಿ: ಮೂರು ರಾಷ್ಟ್ರಗಳ ಪ್ರವಾಸಕ್ಕೆ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಶಕ್ತಿ. ಸಡಗರ ಮತ್ತು ಉತ್ಸಾಹ ಇದೆ. ಮಣಿಪುರಕ್ಕೆ ಭೇಟಿ ನೀಡಲು ಅವರಲ್ಲಿ ಸಹಾನುಭೂತಿ ಇಲ್ಲವೇ ಎಂದು ಭಾನುವಾರ ಕಾಂಗ್ರೆಸ್ ಪ್ರಶ್ನಿಸಿದೆ.
2023, ಮೇ ತಿಂಗಳಿನಿಂದ ಇದು ಮೋದಿಯವರ 35ನೇ ವಿದೇಶ ಪ್ರವಾಸವಾಗಿದೆ. ಆದರೆ, ಹಿಂಸಾಚಾರ ಪೀಡಿತ ಮಣಿಪುರಕ್ಕೆ ಒಮ್ಮಯೂ ಭೇಟಿ ನೀಡಿಲ್ಲ. ಮಣಿಪುರವನ್ನು ಒಬ್ಬ ಪ್ರಧಾನಿ ಈ ರೀತಿ ಭೀಕರವಾಗಿ ನಡೆಸಿಕೊಂಡಿರುವುದು ಕರುಣಾಜನಕ ಎಂದು ವಿರೋಧ ಪಕ್ಷ ಹೇಳಿದೆ.
‘ಪ್ರಧಾನಿ ಇಂದು ಬೆಳಿಗ್ಗೆ ಸೈಪ್ರಸ್, ಕೆನಡಾ ಮತ್ತು ಕ್ರೊಯೇಷಿಯಾಕ್ಕೆ ತೆರಳಿದ್ದಾರೆ. ಭಾರತ ಮತ್ತು ಕೆನಡಾಕ್ಕೆ ಅನ್ವಯಿಸುವಂತೆ (a+b)^2 ಸಮೀಕರಣವನ್ನು ಹೇಳುವ ಮೂಲಕ ಅವರು ಬೀಜಗಣಿತದ ಕುರಿತು ತಮ್ಮ ಜ್ಞಾನದ ಬಗ್ಗೆ ಹೆಮ್ಮೆಪಡುತ್ತಿದ್ದ ಸಮಯವಿತ್ತು. ಆದರೆ, ನಂತರ ಅದು ಭೀಕರ ತಪ್ಪು ಎಂಬುದು ಗೊತ್ತಾಯಿತು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜಿ–7 ಶೃಂಗಸಭೆಗೆ ಭಾರತಕ್ಕೆ ಆಹ್ವಾನ ನೀಡಲು ಕೆನಡಾ ವಿಳಂಬ ಮಾಡುತ್ತಿರುವುದು ಕಂಡುಬಂದಾಗ, ಆಹ್ವಾನ ನೀಡಿದರೂ ಸಹ ಮೋದಿ ಕೆನಡಾಗೆ ಹೋಗುವುದಿಲ್ಲ ಎಂದು ಅವರ ಹಿಂಬಾಲಕರು ಹೇಳುತ್ತಿದ್ದರು. ಇದೇ ರೀತಿ ಹಲವು ಬಾರಿ ಅವರ ಮಾತು ಸುಳ್ಳಾಗಿದೆ ಎಂದು ರಮೇಶ್ ಹೇಳಿದ್ದಾರೆ.
ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿರುವುದರಿಂದ ಭಾರತವನ್ನು ಜಿ7 ಸದಸ್ಯ ರಾಷ್ಟ್ರಗಳಲ್ಲದ ಹಲವು ದೇಶಗಳೊಂದಿಗೆ ಜಿ7 ಶೃಂಗಸಭೆಗೆ ಆಹ್ವಾನಿಸಲಾಗಿದೆ ಎಂದು ಕೆನಡಾದ ಪ್ರಧಾನಿ ಹೇಳಿರುವುದನ್ನು ರಮೇಶ್ ಪ್ರಸ್ತಾಪಿಸಿದ್ದಾರೆ. ಈಗ ಕೆನಡಾಗೆ ಹೋಗಿರುವ ಮೋದಿ ನೀತಿ ಆಯೋಗದ ಸಿಇಒ ಪ್ರಕಾರ, ಭಾರತವು 2025ರ ಮೇ 24 ರಂದು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಯಿತು ಎಂದು ಬಹುಶಃ ಕೆನಡಾ ಪ್ರಧಾನಿಗೆ ನೆನಪಿಸಬಹುದು ಎಂದು ಜೈರಾಮ್ ವ್ಯಂಗ್ಯ ಮಾಡಿದ್ದಾರೆ.
2015ರ ಪ್ರಧಾನಿಯವರ ವಿಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿರುವ ರಮೇಶ್, ಭಾರತ–ಕೆನಡಾ ಸಂಬಂಧವನ್ನು ಮೋದಿ ಹೇಗೆ ವಿವರಿಸಿದ್ದರು ಎಂಬುದನ್ನು ಪ್ರಸ್ತಾಪಿಸಿದ್ದಾರೆ.
‘ಇದು 2023ರ ಮೇ ತಿಂಗಳಿನಿಂದ ಮೋದಿಯವರ 35ನೇ ವಿದೇಶ ಪ್ರವಾಸವಾಗಿದೆ. ಅಂತಹ ಭೇಟಿಗಳಿಗಾಗಿ ಅವರಲ್ಲಿ ಶಕ್ತಿ, ಉತ್ಸಾಹ ಮತ್ತು ಸಡಗರವಿದೆ. ಆದರೆ, ಜನರ ನಿರಂತರವಾಗಿ ಸಂಕಷ್ಟ, ಮತ್ತು ನೋವನ್ನು ಅನುಭವಿಸುತ್ತಿರುವ ಮಣಿಪುರಕ್ಕೆ ಹೋಗಲು ಅವರು ತಮ್ಮ ಸಹಾನುಭೂತಿಯನ್ನು ಬಡಿದೆಬ್ಬಿಸಲು ಸಾಧ್ಯವಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.
2023ರ ಮೇ ತಿಂಗಳಿನಿಂದ ಮಣಿಪುರದ ಮೈತೇಯ–ಕುಕಿ ಸಮುದಾಯಗಳ ನಡುವೆ ಭುಗಿಲೆದ್ದಿರುವ ಜನಾಂಗೀಯ ಹಿಂಸಾಚಾರದಲ್ಲಿ ಕನಿಷ್ಠ 220 ಮಂದಿ ಮೃತಪಟ್ಟಿದ್ದು, ಸಾವಿರಾರು ಜನ ಮನೆಗಳನ್ನು ಕಳೆದುಕೊಂಡಿದ್ದಾರೆ.
ಮಣಿಪುರದ ಜನರ ಸಂಕಷ್ಟಗಳ ಕುರಿತಂತೆ ಪ್ರಧಾನಿ ಸಂವೇದನಾರಹಿತರಾಗಿದ್ದಾರೆ ಎಂದು ಕಳೆದ ವಾರ ಕಾಂಗ್ರೆಸ್ ಆರೋಪಿಸಿತ್ತು.
ಮಣಿಪುರದ ಜನರ ನೋವು ಕೇವಲ ಆ ರಾಜ್ಯ ಮತ್ತು ಈಶಾನ್ಯ ಪ್ರದೇಶದದ್ದಲ್ಲ, ಅದು ಇಡೀ ದೇಶದ ನೋವು ಎಂದು ರಮೇಶ್ ಹೇಳಿದ್ದರು.
ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿದ ನಂತರ ಕೇಂದ್ರವು ಫೆಬ್ರುವರಿ 13ರಿಂದ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.