ವಿಜಯ್ ಕುಮಾರ್ ಸಿನ್ಹಾ (ಸಂಗ್ರಹ ಚಿತ್ರ )
ಪಟ್ನಾ: ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ ಹಾಗೂ ಆರ್‌ಜೆಡಿಯು ಓಲೈಕೆ ರಾಜಕಾರಣದಲ್ಲಿ ನಂಬಿಕೆ ಹೊಂದಿದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರು ಸಂತುಷ್ಟೀಕರಣ ರಾಜಕೀಯದಲ್ಲಿ ಭರವಸೆ ಹೊಂದಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ, ಬಿಹಾರದ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ದೇಶದ ಜನರಿಗೆ ಒಳ್ಳೆಯ ಆಡಳಿತ ಕೊಡುವ ದೃಷ್ಟಿಯಲ್ಲಿ ಮುನ್ನೆಡೆದರೆ, ಕಾಂಗ್ರೆಸ್ ಹಾಗೂ ಆರ್‌ಜೆಡಿಯು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಪಕ್ಷಗಳು ದೇಶದಲ್ಲಿ ಉತ್ತಮ ಆಡಳಿತ , ಅಭಿವೃದ್ಧಿ ವಿಚಾರ ಅಥವಾ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಚಿಂತಿಸುವುದಿಲ್ಲ ಎಂದು ವಿಜಯ್ ಕುಮಾರ್ ಸಿನ್ಹಾ ಆರೋಪಿಸಿದ್ದಾರೆ.
ಬಿಜೆಪಿಯು ಸನಾತನ ಧರ್ಮವನ್ನು ಪ್ರಚಾರದ ಕಾರ್ಡ್ ಆಗಿ ಉಪಯೋಗಿಸುತ್ತಿದೆ ಎಂಬ ಆರ್‌ಜೆಡಿ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರ ಹೇಳಿಕೆಗೆ ಉತ್ತರಿಸಿದ ಸಿನ್ಹಾ, ಇಂಡಿಯಾ ಮೈತ್ರಿಕೂಟವು ಅಧಿಕಾರ ಹಿಡಿಯುವ ಒಂದೇ ಉದ್ದೇಶ ಹೊಂದಿದೆ. ಆದರೆ ಪ್ರಧಾನಿ ಅವರು ‘ಮೋದಿ ಗ್ಯಾರಂಟಿ ‘ ಕುರಿತು ಮಾತನಾಡುತ್ತಿರುವ ವೇಳೆ ವಿರೋಧ ಪಕ್ಷಗಳ ನಾಯಕರು ಜಾತಿ ಹಾಗೂ ಧರ್ಮದ ಬಗ್ಗೆ ಮಾತನಾಡುತ್ತಾರೆ ಎಂದು ಸಿನ್ಹಾ ಹೇಳಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.