ADVERTISEMENT

ಮಸೂದೆಗಳಿಂದ ರೈತರಿಗೆ ತೊಂದರೆಯಾಗಲ್ಲ, ಇದೊಂದು ಪ್ರಮುಖ ತಿರುವು: ನರೇಂದ್ರ ಮೋದಿ

ಏಜೆನ್ಸೀಸ್
Published 20 ಸೆಪ್ಟೆಂಬರ್ 2020, 12:24 IST
Last Updated 20 ಸೆಪ್ಟೆಂಬರ್ 2020, 12:24 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಲು ಉದ್ದೇಶಿಸಿರುವ ಪ್ರಮುಖ ಮೂರು ಕೃಷಿ ಮಸೂದೆಗಳಲ್ಲಿ ಎರಡು ರಾಜ್ಯಸಭೆಯಲ್ಲಿ ಇಂದು ಅಂಗೀಕಾರಗೊಂಡ ನಂತರ ರೈತರನ್ನು ಅಭಿನಂದಿಸಿರುವಪ್ರಧಾನಿ ನರೇಂದ್ರ ಮೋದಿ ಅವರು,ಭಾರತೀಯ ಕೃಷಿ ಇತಿಹಾಸದಲ್ಲಿ ದೊಡ್ಡ ತಿರುವು ಎಂದು ಬಣ್ಣಿಸಿದ್ದಾರೆ.

ಭಾರತೀಯ ಕೃಷಿ ಕ್ಷೇತ್ರಕ್ಕೆ ತಾಂತ್ರಿಕ ಮತ್ತು ರಚನಾತ್ಮಕ ನವೀಕರಣಗಳ ಅಗತ್ಯವಿದ್ದು, ಉತ್ತಮ ಸಾಧನಗಳನ್ನು ಬಳಸಿಕೊಂಡು ರೈತರು ತಮ್ಮ ಇಳುವರಿಯನ್ನು ಹೆಚ್ಚಿಸಿಕೊಳ್ಳಲು ಈ ಮಸೂದೆಗಳು ದಾರಿ ಮಾಡಿಕೊಡುತ್ತವೆ ಎಂದಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮೋದಿ, ಭವಿಷ್ಯದ ಪೀಳಿಗೆಗಾಗಿ ಕೇಂದ್ರ ಸರ್ಕಾರವು ರೈತರಿಗೆ ಸೇವೆ ಸಲ್ಲಿಸಲು ಮತ್ತು ಬಲಿಷ್ಠವಾದ ಕೃಷಿ ಉದ್ಯಮವನ್ನು ನಿರ್ಮಿಸಲು ಉದ್ದೇಶಿಸಿದೆ ಎಂದು ದೇಶದ ರೈತರಿಗೆ ಭರವಸೆ ನೀಡಿದ್ದಾರೆ.

ADVERTISEMENT

ನಮ್ಮ ಕೃಷಿ ಕ್ಷೇತ್ರಕ್ಕೆ ಇತ್ತೀಚಿನ ತಂತ್ರಜ್ಞಾನದ ನೆರವು ಅಗತ್ಯವಿದ್ದು, ಅದು ಕಷ್ಟಪಟ್ಟು ದುಡಿಯುವ ರೈತರಿಗೆ ಸಹಾಯ ಮಾಡುತ್ತದೆ. ಮಸೂದೆಗಳ ಅಂಗೀಕಾರದೊಂದಿಗೆ ಈಗ, ಭವಿಷ್ಯದ ತಂತ್ರಜ್ಞಾನದೆಡೆಗೆ ಸುಲಭವಾಗಿ ಪ್ರವೇಶ ಪಡೆಯುವಂತಾಗಿದ್ದು, ಅದರಿಂದ ಉತ್ಪಾದನೆ ಹೆಚ್ಚುತ್ತದೆ ಮತ್ತು ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ದಶಕಗಳಿಂದಲೂ ಭಾರತೀಯ ರೈತರು ವಿವಿಧ ನಿರ್ಬಂಧಗಳಿಂದ ಬಂಧಿಸಲ್ಪಟ್ಟಿದ್ದಾರೆ ಮತ್ತು ಮಧ್ಯವರ್ತಿಗಳಿಂದ ಬೆದರಿಕೆಗೊಳಗಾಗಿದ್ದಾರೆ. ಸಂಸತ್ತು ಅಂಗೀಕರಿಸಿರುವ ಮಸೂದೆಗಳು ರೈತರನ್ನು ಇಂತಹ ತೊಂದರೆಗಳಿಂದ ಮುಕ್ತಗೊಳಿಸುತ್ತವೆ. ಈ ಮಸೂದೆಗಳು ರೈತರ ಆದಾಯವನ್ನು ದ್ವಿಗುಣಗೊಳಿಸುವ ಮತ್ತು ಅವರಿಗೆ ಹೆಚ್ಚಿನ ಸಮೃದ್ಧಿಯನ್ನು ನೀಡುವ ಪ್ರಯತ್ನಗಳಿಗೆ ನೆರವಾಗುತ್ತವೆ ಎಂದು ತಿಳಿಸಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ಕುರಿತಾಗಿ ರೈತರಿಗೆ ಭರವಸೆ ನೀಡಿರುವ ಅವರು, ಈ ವ್ಯವಸ್ಥೆಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತದೆ ಮತ್ತು ಮಸೂದೆಗಳ ಅಂಗೀಕಾರವು ಅವುಗಳ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ಈ ಮಸೂದೆಗಳು ಕೃಷಿ ಕ್ಷೇತ್ರವನ್ನು ಪರಿವರ್ತಿಸಲು ಮತ್ತು ಉತ್ತಮ ಜೀವನವನ್ನು ನಡೆಸಲು ರೈತರಿಗೆ ಅಧಿಕಾರ ನೀಡುವ ಉದ್ದೇಶವನ್ನು ಹೊಂದಿವೆ ಎಂದು ಅವರು ಹೇಳಿದರು.

ಮಸೂದೆಗಳ ಅಂಗೀಕಾರವು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ಸರ್ಕಾರಿ ಖರೀದಿ ವ್ಯವಸ್ಥೆಗಳ ಪ್ರಕ್ರಿಯೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳುವ ಮೂಲಕ ಪ್ರತಿಪಕ್ಷಗಳು ಮಸೂದೆಯನ್ನು ವಿರೋಧಿಸಿವೆ. ಈ ಮಸೂದೆಗಳು ಖಾಸಗಿಯವರಿಗೆ ಪ್ರಯೋಜನ ಮಾಡಿಕೊಡುತ್ತವೆ ಮತ್ತು ಗುತ್ತಿಗೆ ಕೃಷಿಗೆ ಕಾರಣವಾಗುತ್ತವೆ ಎಂದು ಹಲವಾರು ವಿರೋಧ ಪಕ್ಷಗಳ ಸಂಸದರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.