ಸ್ವಾಮಿತ್ವ ಯೋಜನೆಯಡಿ ಆಸ್ತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು – ಪಿಟಿಐ ಚಿತ್ರ
– ಪಿಟಿಐ ಚಿತ್ರ
ನವದೆಹಲಿ: 'ಸ್ವಾಮಿತ್ವ' ಯೋಜನೆಯಡಿ 65 ಲಕ್ಷ ಆಸ್ತಿ ಪತ್ರಗಳನ್ನು ಶನಿವಾರ ವಿತರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಇದು ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲಿದೆ ಮತ್ತು ಬಡತನ ನಿರ್ಮೂಲನೆಗೆ ಸಹಾಯ ಮಾಡಲಿದೆ' ಎಂದು ಹೇಳಿದರು.
ವರ್ಚುವಲ್ ವೇದಿಕೆ ಮೂಲಕ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಕೆಲ ಫಲಾನುಭವಿಗಳ ಜೊತೆ ಸಂವಾದ ನಡೆಸಿದರು.
‘ಹಳ್ಳಿಗಳಲ್ಲಿನ ಜನರಲ್ಲಿ ಲಕ್ಷಾಂತರ ಕೋಟಿ ಮೌಲ್ಯದ ಆಸ್ತಿ ಇದೆ. ಆದರೆ ಅದಕ್ಕೆ ಯಾವುದೇ ದಾಖಲೆಗಳಿಲ್ಲ. ವಿವಾದಗಳಿರುವ ಕಾರಣ ಅವುಗಳನ್ನು ಕಿತ್ತುಕೊಳ್ಳಲಾಗುತ್ತಿತ್ತು ಮತ್ತು ಬ್ಯಾಂಕ್‌ಗಳು ಅವುಗಳ ಮೇಲೆ ಸಾಲ ನೀಡುತ್ತಿರಲಿಲ್ಲ. ಹಿಂದಿನ ಸರ್ಕಾರಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ದಲಿತರಿಗೆ, ಹಿಂದುಳಿದ ವರ್ಗದವರಿಗೆ ಮತ್ತು ಬುಡಕಟ್ಟು ಜನರಿಗೆ ತುಂಬಾ ತೊಂದರೆಯಾಗಿದೆ’ ಎಂದು ಹೇಳಿದರು.
‘65 ಲಕ್ಷ ಜನರಿಗೆ ಆಸ್ತಿ ಪತ್ರ ವಿತರಿಸಲಾಗಿದ್ದು, ಒಟ್ಟು 2.24 ಕೋಟಿ ಫಲಾನುಭವಿಗಳಿದ್ದಾರೆ. ಅಧಿಕೃತ ಆಸ್ತಿ ಪತ್ರಗಳಿಂದಾಗಿ ಅವರಿಗೆ ಸಾಲ ಮತ್ತು ಸರ್ಕಾರಿ ಸೌಲಭ್ಯಗಳು ಸುಲಭವಾಗಿ ದೊರಕಲಿದೆ’ ಎಂದು ಮೋದಿ ಹೇಳಿದರು.
ಛತ್ತೀಸಗಢ, ಗುಜರಾತ್, ಹಿಮಾಚಲಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಿಜೋರಾಂ, ಒಡಿಶಾ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು–ಕಾಶ್ಮೀರ ಮತ್ತು ಲಡಾಖ್‌ನ 50 ಸಾವಿರಕ್ಕೂ ಅಧಿಕ ಗ್ರಾಮಗಳಲ್ಲಿನ ಜನರಿಗೆ ಆಸ್ತಿ ಪತ್ರ ವಿತರಣೆಯಾಗಲಿದೆ.
ಭೌತಿಕವಾಗಿ ಆಸ್ತಿ ಪತ್ರಗಳ ವಿತರಣೆಗಾಗಿ 230 ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೇಂದ್ರ ಸರ್ಕಾರದ 13 ಸಚಿವರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.