ನರೇಂದ್ರ ಮೋದಿ
ನವದೆಹಲಿ: ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ದೇಶದ ನಾಗರಿಕರಿಗೆ ಶುಭ ಕೋರಿದ್ದಾರೆ. ಈ ಸಂದರ್ಭದಲ್ಲಿ ಅವರು ದೇಶದ ನಾಗರಿಕರನ್ನು ಉದ್ದೇಶಿಸಿ ಮಂಗಳವಾರ ಪತ್ರ ಬರೆದಿದ್ದಾರೆ.
‘ಇದು ಶಕ್ತಿ ಮತ್ತು ಉತ್ಸಾಹವನ್ನು ಹೆಚ್ಚಿಸುವ ಹಬ್ಬ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ಬಳಿಕ ನಡೆಯುತ್ತಿರುವ ಎರಡನೇ ದೀಪಾವಳಿ’ ಎಂದು ಉಲ್ಲೇಖಿಸಿರುವ ಅವರು, ಹಲವು ಸಾಧನೆಗಳ ಬಗ್ಗೆ ಪಟ್ಟಿ ಮಾಡಿ ಹೇಳಿದ್ದಾರೆ.
* ಇಡೀ ಜಗತ್ತು ವಿವಿಧ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಭಾರತ ಸ್ಥಿರತೆ ಸಾಧಿಸಿದೆ. ಈ ಮೂಲಕ ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗುವ ಹಾದಿಯಲ್ಲಿ ಸಾಗುತ್ತಿದೆ
* ಭಾರತವು ‘ಆಪರೇಷನ್ ಸಿಂಧೂರ್’ನಲ್ಲಿ ಯಶಸ್ಸು ಕಂಡಿದೆ. ಅಂತೆಯೇ ನಕ್ಸಲರ ವಿರುದ್ಧದ ಹೋರಾಟದಲ್ಲೂ ಯಶಸ್ಸು ದೊರೆತಿದೆ
* ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳನ್ನು ಕಡಿಮೆಗೊಳಿಸಿದ್ದು, ಸರ್ಕಾರದ ಐತಿಹಾಸಿಕ ಸಾಧನೆ. ‘ಜಿಎಸ್‌ಟಿ ಬಚತ್ ಉತ್ಸವ’ದಿಂದ ನಾಗರಿಕರು ಸಾವಿರಾರು ಕೋಟಿ ರೂಪಾಯಿಗಳನ್ನು ಉಳಿಸುತ್ತಿದ್ದಾರೆ
* ‘ಏಕ್ ಭಾರತ್, ಶ್ರೇಷ್ಠ ಭಾರತ್’ ಮನೋಭಾವವನ್ನು ಉತ್ತೇಜಿಸಿ, ಎಲ್ಲ ಭಾಷೆಗಳನ್ನೂ ಗೌರವಿಸಿ, ಆರೋಗ್ಯಕ್ಕೆ ಆದ್ಯತೆ ನೀಡಿ, ಯೋಗವನ್ನು ಅಳವಡಿಸಿಕೊಳ್ಳಿ, ಸ್ವದೇಶಿ ಬಳಕೆಗೆ ಒತ್ತು ನೀಡಿ. ಈ ಪ್ರಯತ್ನಗಳು ವಿಕಸಿತ ಭಾರತಕ್ಕೆ ನೆರವಾಗುತ್ತವೆ
* ಶ್ರೀರಾಮ ನಮಗೆ ನೀತಿಯನ್ನು ಎತ್ತಿಹಿಡಿಯಲು ಮತ್ತು ಅನ್ಯಾಯದ ವಿರುದ್ಧ ಹೋರಾಡಲು ಧೈರ್ಯ ನೀಡುತ್ತಾನೆ. ಕೆಲ ತಿಂಗಳ ಹಿಂದೆ ‘ಆಪರೇಷನ್ ಸಿಂಧೂರ್’ ವೇಳೆ ನಾವು ಇದರ ಜೀವಂತ ಉದಾಹರಣೆ ನೋಡಿದ್ದೇವೆ