ಪ್ರಿಯಾಂಕಾ ಗಾಂಧಿ ವಾದ್ರಾ
(ಪಿಟಿಐ ಚಿತ್ರ)
ರಾಯ್‌ಬರೇಲಿ( ಉತ್ತರ ಪ್ರದೇಶ): ದೇಶದ ಸಂಪೂರ್ಣ ಸಂಪತ್ತನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕೈದು ಶ್ರೀಮಂತರಿಗೆ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಸಹೋದರ ಹಾಗೂ ರಾಯ್‌ಬರೇಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಹುಲ್ ಗಾಂಧಿ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿಯ ಸಂಸದರಾಗಿದ್ದಾರೆ. ಆದರೆ ಅವರು ಈವರೆಗೂ ಯಾವುದೇ ಗ್ರಾಮಕ್ಕೆ ಭೇಟಿ ನೀಡಿಲ್ಲ ಹಾಗೂ ರೈತನ ಕಷ್ಟವನ್ನು ವಿಚಾರಿಸಿಲ್ಲ ಎಂದು ಕಿಡಿಕಾರಿದ್ದಾರೆ.
ಖಾಸಗೀಕರಣವು ಕೆಟ್ಟದಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಂಪತ್ತನ್ನು ನಾಲ್ಕೈದು ಶ್ರೀಮಂತರಿಗೆ ನೀಡಿರುವುದು ಸರಿಯಲ್ಲ ಎಂದು ಪ್ರಿಯಾಂಕಾ ಹೇಳಿದ್ದಾರೆ.
ದೇಶದ ಕಲ್ಲಿದ್ದಲು, ವಿದ್ಯುತ್, ಬಂದರು ಮತ್ತು ವಿಮಾನ ನಿಲ್ದಾಣಗಳೆಲ್ಲವೂ ಪ್ರಧಾನಿಯವರ ಸ್ನೇಹಿತರ ಬಳಿಯೇ ಇವೆ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.
ಆಗಿನ ಪ್ರಧಾನಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ಹಳ್ಳಿಗಳಿಗೆ ಭೇಟಿ ನೀಡಿ ರೈತರ, ಜನರ ಕಷ್ಟಗಳನ್ನು ಆಲಿಸುತ್ತಿದ್ದರು. ಆದರೆ ಇಂದಿನ ಪ್ರಧಾನಿ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಅಲ್ಲಿ ನಿಮಗೆ ಬಂಡಾಳಶಾಹಿ ವ್ಯಕ್ತಿಗಳು ಕಾಣುತ್ತಾರೆ ವಿನಃ ರೈತರಲ್ಲ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.