ADVERTISEMENT

ವಾರಾಣಸಿಯಲ್ಲಿ ಯೋಗಿ ಹೊಗಳಿ ಉತ್ತರ ಪ್ರದೇಶದ ಚುನಾವಣಾ ಕಹಳೆ ಮೊಳಗಿಸಿದ ಮೋದಿ

ಸಂಜಯ ಪಾಂಡೆ
Published 15 ಜುಲೈ 2021, 12:58 IST
Last Updated 15 ಜುಲೈ 2021, 12:58 IST
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಗುರುವಾರ ನಡೆದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ ಅವರು ವಂದಿಸುತ್ತಿರುವುದು. (ಪಿಟಿಐ ಚಿತ್ರ)
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಗುರುವಾರ ನಡೆದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ ಅವರು ವಂದಿಸುತ್ತಿರುವುದು. (ಪಿಟಿಐ ಚಿತ್ರ)   

ವಾರಾಣಸಿ(ಉತ್ತರ ಪ್ರದೇಶ): ‘ಯೋಗಿ ಆದಿತ್ಯನಾಥ್‌ ಅವರು ಕಠಿಣ ಪರಿಶ್ರಮದಿಂದ ‘ಆಧುನಿಕ ಉತ್ತರ ಪ್ರದೇಶ’ವನ್ನು ನಿರ್ಮಿಸುತ್ತಿದ್ದಾರೆ,’ ಎಂದು ಹೊಗಳಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ಮೂಲಕ ತಮ್ಮಿಬ್ಬರ ನಡುವೆ ಬಿರುಕಿದೆ ಎಂಬ ಊಹಾಪೋಹಗಳಿಗೆ ಅಂತ್ಯ ಹಾಡುವ ಸ್ಪಷ್ಟ ಪ್ರಯತ್ನ ಮಾಡಿದ್ದಾರೆ. ಇದರ ಜೊತೆಗೇ, ಮೋದಿ ಅವರು ತಾವು ಪ್ರತಿನಿಧಿಸುವ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ₹1583 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಮೂಲಕ ಚುನಾವಣಾ ತಾಲೀಮು ಬಿರುಸುಗೊಳಿಸಿದ್ದಾರೆ.

ಮುಂದಿನ ವರ್ಷದ ಮಾರ್ಚ್‌ನಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಗಳಿವೆ.

ವಾರಾಣಸಿಯ ಕಾರ್ಯಕ್ರಮದಲ್ಲಿ ಮಾನಾಡಿದ ನರೇಂದ್ರ ಮೋದಿ, ‘ ಯೋಗಿ ಅವರು ಶ್ರಮವಹಿಸುತ್ತಿದ್ದಾರೆ. ಇಲ್ಲಿನ ಯೋಜನೆಗಳನ್ನು ಪರಿಶೀಲಿಸಲು ಅವರು ಬರುತ್ತಿರುತ್ತಾರೆ,‘ ಎಂದು ತಿಳಿಸಿದರು. '

ADVERTISEMENT

‘ಯೋಗಿ ಅವರು ಉತ್ತರ ಪ್ರದೇಶದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಕೊನೆಗೊಳಿಸಿದರು. ಇಲ್ಲಿನ ಜನ ಸರ್ಕಾರದ ಕಾರ್ಯಕ್ರಮಗಳ ಫಲಾನುಭವ ಪಡೆಯುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಈಗ ಕಾನೂನಿದೆ. ಮಹಿಳೆಯರು ಸುರಕ್ಷಿತ ಭಾವ ಅನುಭವಿಸುತ್ತಿದ್ದಾರೆ,‘ ಎಂದು ಮೋದಿ ಯೋಗಿ ಆಡಳಿತವನ್ನು ಬಣ್ಣಿಸಿದರು. ಯೋಗಿ ಆದಿತ್ಯನಾಥ್‌ ಅವರು ವೇದಿಕೆಯ ಮೇಲಿರುವಾಗಲೇ, ಅವರತ್ತ ನೋಡುತ್ತಲೇ ಮೋದಿ ಈ ಮಾತುಗಳನ್ನಾಡಿದರು.

ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಭಾಯಿಸಲಾಗಿದೆ ಎಂದು ಮೋದಿ ಅವರು ಆದಿತ್ಯನಾಥರನ್ನು ಶ್ಲಾಘಿಸಿದರು. ಈಗ ರಾಜ್ಯದಲ್ಲಿ ಪರಿಸ್ಥಿತಿ ಉತ್ತಮವಾಗಿದೆ ಎಂದು ಹೇಳಿದರು. ‘ಉತ್ತರ ಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ ಪರೀಕ್ಷೆಗಳನ್ನು ನಡೆಸಲಾಗಿದೆ. ರಾಜ್ಯವು ಗರಿಷ್ಠ ಮಂದಿಗೆ ಲಸಿಕೆ ನೀಡಿದೆ" ಎಂದು ಪ್ರಧಾನಿ ಹೇಳಿದರು.

ಕೋವಿಡ್ ಪರಿಸ್ಥಿತಿ ನಿಭಾಯಿಸಲು ಸರ್ಕಾರ ವಿಫಲವಾಗಿದೆ ಎಂಬ ಆರೋಪ, ಯೋಗಿ ಅವರ ಕಾರ್ಯವೈಖರಿಯ ಬಗ್ಗೆ ಪಕ್ಷದಲ್ಲಿದೆ ಎನ್ನಲಾದ ಅಸಮಾಧಾನ, ಆದಿತ್ಯನಾಥ್‌ ಅವರನ್ನು ಬದಲಿಸಲು ಬಿಜೆಪಿ ಕೇಂದ್ರ ನಾಯಕತ್ವ ಚಿಂತನೆ ನಡೆಸುತ್ತಿದೆ ಎಂಬ ವರದಿಗಳ ನಡುವೆಯೇ ಆದಿತ್ಯನಾಥ್ ಅವರನ್ನು ಪ್ರಧಾನಿ ಪ್ರಶಂಸಿಸಿದ್ದಾರೆ.

ಯೋಗಿ ಆದಿತ್ಯನಾಥ್‌ ಅವರನ್ನು ಕಟ್ಟಿಹಾಕಲು ಮೋದಿ ಅವರ ವಿಶ್ವಾಸಾರ್ಹ ಮಾಜಿ ಅಧಿಕಾರಿ ಎ.ಕೆ ಶರ್ಮಾ ಅವರನ್ನು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆ ಎಂಬ ವರದಿಗಳು ಪ್ರಕಟವಾಗಿದ್ದವು. ಆದರೆ, ಎ.ಕೆ ಶರ್ಮಾ ಅವರನ್ನು ಡಿಸಿಎಂ ಸ್ಥಾನದಲ್ಲಿ ಕೂರಿಸುವ ಪ್ರಯತ್ನಗಳನ್ನು ಹಿಮ್ಮೆಟ್ಟಿದ್ದ ಯೋಗಿ ಗೆಲುವಿನ ನಗೆ ಬೀರಿದ್ದರು. ಕೊನೆಗೆ ಎ.ಕೆ ಶರ್ಮಾ ಅವರು ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಇದೆಲ್ಲದರ ನಡುವೆ ಮೋದಿ ಅವರು ತಾವು ಪ್ರತಿನಿಧಿಸುತ್ತಿರುವ ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ ₹1583 ಕೋಟಿಗಳ ಯೋಜನೆಗಳಿಗೆ ಚಾಲನೆ ನೀಡಿದರು. ಅಲ್ಲದೆ, ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಅವರು ವಾರಾಣಸಿಯ ಕಾರ್ಯಕ್ರಮದಲ್ಲಿ ಉಲ್ಲೇಖಿಸಿ ಮಾತನಾಡಿದರು. ಈ ಮೂಲಕ ಅವರು ಚುನಾವಣಾ ಕಹಳೆ ಮೊಳಗಿಸಿದ್ದಾರೆ.

ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ‘ತಾಯಿ ಮತ್ತು ಮಕ್ಕಳ ಆರೋಗ್ಯ ಘಟಕ‘, ಜಪಾನ್‌ ಸರ್ಕಾರದ ನೆರವಿನೊಂದಿಗೆ ನಿರ್ಮಿಸಲಾಗುತ್ತಿರುವ ‘ಅಂತರರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರ– ರುದ್ರಾಕ್ಷ್’ ಮೋದಿಯವರು ಉದ್ಘಾಟಿಸಿದ ಅಭಿವೃದ್ಧಿ ಯೋಜನೆಗಳಲ್ಲಿ ಪ್ರಮುಖವಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.