ADVERTISEMENT

ಡಿಜಿಟಲ್‌ ಆರೋಗ್ಯ ಕಾರ್ಡ್‌ಗೆ ಪ್ರಧಾನಿ ಮೋದಿ ಚಾಲನೆ: ಹೊಸ ಯೋಜನೆ ಮಾಹಿತಿ ಇಲ್ಲಿದೆ

‘ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌’

ಪಿಟಿಐ
Published 27 ಸೆಪ್ಟೆಂಬರ್ 2021, 8:02 IST
Last Updated 27 ಸೆಪ್ಟೆಂಬರ್ 2021, 8:02 IST
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ   

ನವದೆಹಲಿ: ಆರೋಗ್ಯ ಕುರಿತ ಸಮಗ್ರ ವಿವರಗಳುಳ್ಳ ಡಿಜಿಟಲ್‌ ಆರೋಗ್ಯ ಕಾರ್ಡ್ ವಿತರಿಸುವ ‘ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದರು.

ಈ ಯೋಜನೆಯ ಪೈಲಟ್ ಕಾರ್ಯಕ್ರಮವನ್ನು ಮೋದಿ 2020ರ ಆಗಸ್ಟ್‌ 15ರಂದು ಪ್ರಕಟಿಸಿದ್ದರು. ಪ್ರಸ್ತುತ ಇದನ್ನು ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಆಯುಷ್ಮಾನ್ ಭಾರತ್‌ ಪ್ರಧಾನಮಂತ್ರಿ ಆರೋಗ್ಯ ಯೋಜನೆಯ (ಎಬಿ ಪಿಎಂ ಜೆಎವೈ) 3ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ದೇಶವ್ಯಾಪಿ ವಿಸ್ತರಿಸಲಾಗುತ್ತದೆ.

ಜನ್‌ಧನ್‌, ಆಧಾರ್‌ ಸಂಖ್ಯೆ ನೋಂದಣಿ ಮಾದರಿಯಲ್ಲಿಯೇ ಜಾರಿಗೊಳ್ಳುವ ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ ಯೋಜನೆಯು ವಿಸ್ತೃತ ವಿವರ, ಮೂಲಸೌಲಭ್ಯ ಸೇವೆ ಒದಗಿಸುವ ಗುರಿ ಹೊಂದಿದೆ. ಇದೇ ವೇಳೆ ಆರೋಗ್ಯಕ್ಕೆ ಸಂಬಂಧಿಸಿದ ವ್ಯಕ್ತಿಗತ ವಿವರಗಳನ್ನು ಗೋಪ್ಯವಾಗಿಡಲೂ ಒತ್ತು ನೀಡಲಾಗುತ್ತದೆ.

ADVERTISEMENT

ನಾಗರಿಕರ ಸಮ್ಮತಿಯನ್ನು ಆಧರಿಸಿ ಆರೋಗ್ಯ ದಾಖಲೆಗಳ ವಿನಿಮಯಕ್ಕೂ ಅವಕಾಶವಿದೆ ಎಂದು ಪ್ರಧಾನಮಂತ್ರಿಗಳ ಕಚೇರಿಯ ಹೇಳಿಕೆ ತಿಳಿಸಿದೆ.

ಈ ಯೋಜನೆಯ ಪ್ರಮುಖ ಅಂಶವೆಂದರೆ ಡಿಜಿಟಲ್ ಆರೋಗ್ಯ ಗುರುತು ಚೀಟಿ ವ್ಯಕ್ತಿಯ ಆರೋಗ್ಯ ಖಾತೆಯಾಗಿರಲಿದೆ. ಸಮಗ್ರ ಆರೋಗ್ಯ ವಿವರಗಳನ್ನು ಹೊಂದಿರಲಿದೆ. ಇದನ್ನು ಮೊಬೈಲ್‌ ಅಪ್ಲಿಕೇಷನ್‌ನಲ್ಲೂ ವೀಕ್ಷಿಸಬಹುದಾಗಿದೆ. ಆಧುನಿಕ ಮತ್ತು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗೆ ನೆರವಾಗುವಂತೆ ಆರೋಗ್ಯಸೇವೆ ವೃತ್ತಿಪರ ನೋಂದಣಿ (ಎಚ್‌ಆರ್‌ಆರ್), ಆರೋಗ್ಯ ಸೇವೆಯ ಸೌಲಭ್ಯ ನೋಂದಣಿ (ಎಚ್‌ಎಫ್‌ಆರ್‌)ಯಲ್ಲಿಯೂ ಈ ವ್ಯಕ್ತಿಗತ ಮಾಹಿತಿಗಳು ಲಭ್ಯವಿರಲಿವೆ.

ಈ ಕ್ರಮವು ವೈದ್ಯರು, ಆಸ್ಪತ್ರೆಗಳು ಹಾಗೂ ಆರೋಗ್ಯ ಸೇವೆ ಸಂಸ್ಥೆಗಳ ಮೇಲಿನ ಒತ್ತಡವನ್ನು ಕುಗ್ಗಿಸಲಿದೆ. ಜನರೂ ಒಂದು ಕ್ಲಿಕ್‌ ಮೂಲಕ ಆರೋಗ್ಯಸೇವೆ ಸೌಲಭ್ಯ ಪಡೆಯಲು ನೆರವಾಗಲಿದೆ ಎಂದು ಪ್ರಧಾನಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ.

ಕ್ರಾಂತಿಕಾರಕ ಬದಲಾವಣೆ –ಮೋದಿ ವಿಶ್ವಾಸ:ಡಿಜಿಟಲ್‌ ಆರೋಗ್ಯ ಕಾರ್ಡ್‌ ವಿತರಿಸುವ ಈ ಯೋಜನೆಯು ದೇಶದಲ್ಲಿ ಆರೋಗ್ಯ ಸೇವೆಯನ್ನು ಒದಗಿಸುವ ಕಾರ್ಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ. ಆರೋಗ್ಯಸೇವೆ ಕ್ಷೇತ್ರವನ್ನು ಬಲಪಡಿಸುವ ಏಳು ವರ್ಷಗಳ ಪ್ರಯತ್ನದ ಫಲವಾಗಿ ಇದು ಜಾರಿಗೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಆಯುಷ್ಮಾನ್‌ ಭಾರತ್ ಡಿಜಿಟಲ್ ಮಿಷನ್‌ ರೋಗಿಗಳ ರಕ್ಷಣೆ, ಉತ್ತಮ ಚಿಕಿತ್ಸೆ ಒದಗಿಸುವುದಕ್ಕೆ ಪೂರಕವಾಗಿ ವಿಶ್ವಾಸಾರ್ಹವಾದ ಮಾಹಿತಿಯನ್ನು ಒದಗಿಸಲಿದೆ. ಆರೋಗ್ಯ ದಾಖಲೆಗಳನ್ನು ಡಿಜಿಟಲ್‌ ಸ್ವರೂಪದಲ್ಲಿ ರಕ್ಷಿಸಲಾಗುತ್ತದೆ. ದೇಶದ ಬಡ ವರ್ಗದವರು ಈ ಯೋಜನೆಯಿಂದ ಹೆಚ್ಚಿನ ಲಾಭ ಪಡೆಯಲಿದ್ದಾರೆ ಎಂದು ಹೇಳಿದರು.

ಆರೋಗ್ಯಸೇವೆಯಲ್ಲಿ ತಂತ್ರಜ್ಞಾನದ ಪಾತ್ರವನ್ನು ಉಲ್ಲೇಖಿಸಿದ ಅವರು, ಕೊರೊನಾ ಸೋಂಕು ಹರಡುವಿಕೆ ತಡೆಯುವಲ್ಲಿ ಆರೋಗ್ಯ ಸೇತು ಅಪ್ಲಿಕೇಷನ್‌ ಪಾತ್ರವಿದೆ. ಒಟ್ಟಾರೆ 90 ಕೋಟಿ ಡೋಸ್‌ ಲಸಿಕೆ ನೀಡಲಾಗಿದ್ದು, ಈ ಪ್ರಕ್ರಿಯೆಯಲ್ಲಿ ಕೋ–ವಿನ್‌ ಅಪ್ಲಿಕೇಷನ್‌ ಪಾತ್ರ ಗಣನೀಯವಾದುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.