ನವದೆಹಲಿ: ದೇಶದ ಒಂದು ಲಕ್ಷ ‘ಮುಂಚೂಣಿ ಕೊರೊನಾ ಯೋಧರ (ಫ್ರಂಟ್‌ಲೈನ್ ಕೋವಿಡ್ ವಾರಿಯರ್) ಕೌಶಲ ವೃದ್ಧಿಸುವ ಉದ್ದೇಶದಿಂದ ವಿನ್ಯಾಸಗೊಳಿಸಿರುವ ‘ತ್ವರಿತಗತಿಯ ತರಬೇತಿ ಕಾರ್ಯಕ್ರಮ‘ (ಕಸ್ಟಮೈಸ್ಡ್ ಕ್ರ್ಯಾಶ್ ಕೋರ್ಸ್ ಪ್ರೋಗ್ರಾಮ್) ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕೊರೊನಾ ಎರಡನೇ ಅಲೆ ಸಾಕಷ್ಟು ಸವಾಲುಗಳನ್ನು ಸೃಷ್ಟಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ದೇಶದಲ್ಲಿರುವ ಸುಮಾರು 1 ಲಕ್ಷ ಮುಂಚೂಣಿ ಕೊರೊನಾ ಯೋಧರಿಗೆ, ಈ ರೀತಿ ಕೌಶಲ ಅಭಿವೃದ್ಧಿ ತರಬೇತಿ ನೀಡುವ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ‘ ಎಂದು ಹೇಳಿದರು.
ಆರೋಗ್ಯ ಕ್ಷೇತ್ರದಲ್ಲಿ ಮಾನವಶಕ್ತಿಯ ಪ್ರಸ್ತುತ ಮತ್ತು ಭವಿಷ್ಯದ ಅಗತ್ಯಗಳನ್ನು ಪೂರೈಸಲು ನುರಿತ ವೈದ್ಯಕೀಯೇತರ ಆರೋಗ್ಯ ಕಾರ್ಯಕರ್ತರನ್ನು ಅಣಿಗೊಳಿಸುವ ಹಿನ್ನೆಲೆಯಲ್ಲಿ ಈ ವಿಶೇಷ ಕೋರ್ಸ್ (ಕಾರ್ಯಕ್ರಮ) ರೂಪಿಸಲಾಗಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.
ಕೋವಿಡ್–19 ಮುಂಚೂಣಿ ಕಾರ್ಯಕರ್ತರಿಗೆ ತ್ವರಿತಗತಿಯಲ್ಲಿ ತರಬೇತಿ ನೀಡುವುದಕ್ಕಾಗಿ ವಿಶೇಷ ಈ ಕೋರ್ಸ್ ಆರಂಭಿಸಲಾಗುತ್ತಿದೆ. ಈ ಕೋರ್ಸ್‌ನಲ್ಲಿ ಆರು ವಿವಿಧ ಉದ್ಯೋಗಗಳಿಗೆ ನೆರವಾಗುವ ರೀತಿಯಲ್ಲಿ ತರಬೇತಿ ನೀಡಲಾಗುತ್ತದೆ. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗಗಳು ಈ ರೀತಿ ಇವೆ; ಮನೆಯಲ್ಲಿ ಆರೈಕೆ, ಪ್ರಾಥಮಿಕ ಹಂತದ ಆರೈಕೆ, ಆರೋಗ್ಯ ಸುಧಾರಿಸಿದ ನಂತರ ಆರೈಕೆ, ಪರೀಕ್ಷೆಗಾಗಿ ಮಾದರಿ ಸಂಗ್ರಹಿಸುವುದು ಮತ್ತು ವೈದ್ಯಕೀಯ ಉಪಕರಣಗಳ ಬಳಕೆ ಮಾಡುವುದು. ಈ ಎಲ್ಲ ಉದ್ಯೋಗಗಳನ್ನು ಮಾಡುವವರಿಗಾಗಿ ಈ ಕೋರ್ಸ್‌ನಲ್ಲಿ ತರಬೇತಿ ನೀಡಲಾಗುತ್ತದೆ.
‘ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನೆ 3.0ರ ಕೇಂದ್ರ ಘಟಕದ ಅಡಿಯಲ್ಲಿ ಈ ಕೋರ್ಸ್ ಅನ್ನು ವಿಶೇಷ ಕಾರ್ಯಕ್ರಮವಾಗಿ ವಿನ್ಯಾಸಗೊಳಿಸಲಾಗಿದೆ. ಇದಕ್ಕಾಗಿ ₹270 ಕೋಟಿ ವಿನಿಯೋಗಿಸಲಾಗಿದೆ‘ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.