ADVERTISEMENT

ಪೊಲೀಸರಿಗೆ ‘ಒಂದು ದೇಶ, ಒಂದು ಸಮವಸ್ತ್ರ’ದ ಕಲ್ಪನೆ ಪ್ರಸ್ತಾಪಿಸಿದ ಮೋದಿ

ಪಿಟಿಐ
Published 28 ಅಕ್ಟೋಬರ್ 2022, 7:31 IST
Last Updated 28 ಅಕ್ಟೋಬರ್ 2022, 7:31 IST
ನರೇಂದ್ರ ಮೋದಿ
ನರೇಂದ್ರ ಮೋದಿ    

ಸೂರಜ್‌ಕುಂಡ್‌ (ಹರಿಯಾಣ): ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಪೊಲೀಸರಿಗಾಗಿ ‘ಒಂದು ರಾಷ್ಟ್ರ, ಒಂದು ಸಮವಸ್ತ್ರ’ದ ಕಲ್ಪನೆಯನ್ನು ಪ್ರಸ್ತಾಪಿಸಿದ್ದಾರೆ. ಆದರೆ, ಇದು ಕೇವಲ ಸಲಹೆ ಎಂದಿರುವ ಅವರು, ರಾಜ್ಯಗಳ ಮೇಲೆ ಈ ಕಲ್ಪನೆಯನ್ನು ಹೇರಲು ಯತ್ನಿಸುವುದಿಲ್ಲ ಎಂದಿದ್ದಾರೆ.

ಹರಿಯಾಣದಲ್ಲಿ ನಡೆಯುತ್ತಿರುವ ರಾಜ್ಯಗಳ ಗೃಹ ಮಂತ್ರಿಗಳ ‘ಚಿಂತನ ಶಿಬಿರ’ ಉದ್ದೇಶಿಸಿ ಮಾತನಾಡಿದ ಮೋದಿ, ಅಪರಾಧ ಮತ್ತು ಅಪರಾಧಿಗಳನ್ನು ನಿಭಾಯಿಸಲು ರಾಜ್ಯಗಳ ನಡುವೆ ನಿಕಟ ಸಹಕಾರದ ಅಗತ್ಯವಿದೆ ಎಂದು ಹೇಳಿದರು.

ಸಹಕಾರ ಒಕ್ಕೂಟವು ಸಂವಿಧಾನದ ಆಶಯ ಮಾತ್ರವಲ್ಲದೆ ರಾಜ್ಯಗಳು ಮತ್ತು ಕೇಂದ್ರದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ADVERTISEMENT

‘ಪೊಲೀಸರಿಗಾಗಿ ಪ್ರಸ್ತಾಪಿಸಲಾಗುತ್ತಿರುವ ‘ಒಂದು ರಾಷ್ಟ್ರ, ಒಂದು ಸಮವಸ್ತ್ರ’ ಕೇವಲ ಕಲ್ಪನೆ ಮಾತ್ರ. ನಾನು ಅದನ್ನು ನಿಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಿಲ್ಲ. ಸ್ವಲ್ಪ ಯೋಚಿಸಿ. ಇದು ಆಗಬಹುದಾದಂಥದ್ದು. 5 ವರ್ಷ, ಇಲ್ಲವೇ 50, ಅಥವಾ 100 ವರ್ಷಗಳಲ್ಲಿ ಆಗಬಹುದಾದಂಥದ್ದು. ಸ್ವಲ್ಪ ಯೋಚಿಸಿ’ ಎಂದು ಮೋದಿ ಹೇಳಿದರು.

ದೇಶದಾದ್ಯಂತ ಪೊಲೀಸರು ಒಂದೇ ಕಾಣಬೇಕೆಂದು ಭಾವಿಸುವುದಾಗಿ ಮೋದಿ ಹೇಳಿದರು.

ಕಾನೂನು–ಸುವ್ಯವಸ್ಥೆ ಮತ್ತು ಭದ್ರತೆಯ ಸವಾಲುಗಳನ್ನು ಎದುರಿಸಲು ಎಲ್ಲಾ ಏಜೆನ್ಸಿಗಳ ಸಂಘಟಿತ ಪ್ರಯತ್ನಕ್ಕೆ ಅವರು ಮನವಿ ಮಾಡಿದರು. ಅಲ್ಲದೇ, ಹಳೆಯ ಕಾನೂನುಗಳನ್ನು ಪರಿಶೀಲಿಸಬೇಕಾಗಿಯೂ, ಪ್ರಸ್ತುತ ಸಂದರ್ಭಕ್ಕೆ ತಿದ್ದುಪಡಿ ಮಾಡಬೇಕಾಗಿಯೂ ಅವರು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.

ಪೊಲೀಸರ ಬಗ್ಗೆ ಉತ್ತಮ ಗ್ರಹಿಕೆ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಮತ್ತು ಸಮಸ್ಯೆಗಳು ಪರಿಹಾರವಾಗಬೇಕು ಎಂದು ಮೋದಿ ಇದೇ ವೇಳೆ ಸಲಹೆ ನೀಡಿದರು.

ದಕ್ಷತೆ, ಉತ್ತಮ ಫಲಿತಾಂಶ ಮತ್ತು ಸಾಮಾನ್ಯ ಜನರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳು ಪರಸ್ಪರ ಸಹಕಾರ ಹೊಂದಿರಬೇಕು ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.