ADVERTISEMENT

ನವದೆಹಲಿಯ ರಕಾಬ್‌ಗಂಜ್‌ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದ ಮೋದಿ

ಕುತೂಹಲಕ್ಕೆ ಕಾರಣವಾದ ಪ್ರಧಾನಿ ದಿಢೀರ್‌ ಭೇಟಿ

ಪಿಟಿಐ
Published 20 ಡಿಸೆಂಬರ್ 2020, 6:17 IST
Last Updated 20 ಡಿಸೆಂಬರ್ 2020, 6:17 IST
ಸಿಖ್‌ ಧರ್ಮಗುರು ಗುರು ತೇಗ್‌ ಬಹದ್ದೂರ್‌ ಅವರ 400ನೇ ಬಲಿದಾನ ದಿನದ (ಪ್ರಕಾಶ್ ಪರ್ವ) ಪ್ರಯುಕ್ತ ನವದೆಹಲಿಯ ರಕಾಬ್‌ಗಂಜ್‌ನ ಗುರುದ್ವಾರದಲ್ಲಿ ಭಾನುವಾರ ನರೇಂದ್ರ ಮೋದಿ ಅವರು ಪ್ರಾರ್ಥನೆ ಸಲ್ಲಿಸಿದರು –ಪಿಟಿಐ ಚಿತ್ರ
ಸಿಖ್‌ ಧರ್ಮಗುರು ಗುರು ತೇಗ್‌ ಬಹದ್ದೂರ್‌ ಅವರ 400ನೇ ಬಲಿದಾನ ದಿನದ (ಪ್ರಕಾಶ್ ಪರ್ವ) ಪ್ರಯುಕ್ತ ನವದೆಹಲಿಯ ರಕಾಬ್‌ಗಂಜ್‌ನ ಗುರುದ್ವಾರದಲ್ಲಿ ಭಾನುವಾರ ನರೇಂದ್ರ ಮೋದಿ ಅವರು ಪ್ರಾರ್ಥನೆ ಸಲ್ಲಿಸಿದರು –ಪಿಟಿಐ ಚಿತ್ರ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ರಕಾಬ್‌ಗಂಜ್‌ನಲ್ಲಿರುವ ಗುರುದ್ವಾರಕ್ಕೆ ಭಾನುವಾರ ದಿಢೀರ್‌ ಭೇಟಿ ನೀಡಿ, ಗುರು ತೇಗ್‌ ಬಹದ್ದೂರ್‌ ಅವರಿಗೆ ಗೌರವ ಸಲ್ಲಿಸಿದರು.

ಗುರು ತೇಗ್‌ ಬಹದ್ದೂರ್‌ ಅವರ ತ್ಯಾಗ, ಬಲಿದಾನವನ್ನು ಸ್ಮರಿಸಿದ ಅವರು, ಪ್ರಾರ್ಥನೆಯನ್ನೂ ಸಲ್ಲಿಸಿದರು. ಸಿಖ್ಖರ 9ನೇ ಧರ್ಮಗುರು ಗುರು ತೇಗ್‌ ಬಹದ್ದೂರ್‌ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ರಕಾಬ್‌ಗಂಜ್‌ನ ಗುರುದ್ವಾರದಲ್ಲಿಯೇ ನೆರವೇರಿಸಲಾಗಿದೆ. ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ಶನಿವಾರವಷ್ಟೇ ನಡೆದಿದೆ.

ಗುರುದ್ವಾರಕ್ಕೆ ಪ್ರಧಾನಿ ಮೋದಿ ಅವರ ದಿಢೀರ್‌ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಅವರ ಈ ನಡೆಗೆ ಮಹತ್ವ ಬಂದಿದೆ.

ADVERTISEMENT

ಪ್ರಧಾನಿ ಭೇಟಿ ವೇಳೆ ಗುರುದ್ವಾರದ ಬಳಿ ಪೊಲೀಸ್‌ ಬಂದೋಬಸ್ತ್‌ ಇಲ್ಲ. ಜನರ ಸಂಚಾರಕ್ಕೆ ನಿರ್ಬಂಧವನ್ನೂ ಹೇರಿಲ್ಲ ಎಂದು ಮೂಲಗಳು ಹೇಳಿವೆ.

‘ಈ ದಿನ ಬೆಳಿಗ್ಗೆ ನಾನು ಐತಿಹಾಸಿಕ ಗುರುದ್ವಾರ ರಕಾಬ್‌ಗಂಜ್‌ ಸಾಹಿಬ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ, ಧನ್ಯನಾದೆ. ಗುರು ತೇಗ್‌ ಬಹದ್ದೂರ್‌ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆವನ್ನು ಇಲ್ಲಿಯೇ ನೆರವೇರಿಸಲಾಗಿದೆ. ವಿಶ್ವದೆಲ್ಲೆಡೆ ಇರುವ ಅವರ ಅನುಯಾಯಿಗಳಂತೆಯೇ ನಾನೂ ಸಹ ಗುರು ತೇಗ್‌ ಬಹದ್ದೂರ್‌ ಅವರ ತ್ಯಾಗ, ಬಲಿದಾನ ಹಾಗೂ ದಯಾಶೀಲ ಗುಣಗಳಿಂದ ಪ್ರೇರೇಪಿತನಾಗಿದ್ದೇನೆ’ ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.

‘ಸಂಕಷ್ಟದ ಸಮಯದಲ್ಲಿ ಹಿಂದೂಗಳ ರಕ್ಷಣೆ ಮಾಡಿ, ಸರ್ವೋಚ್ಚ ಬಲಿದಾನ ಮಾಡಿದ ಗುರೂಜಿ, ಭ್ರಾತೃತ್ವದ ಸಂದೇಶ ಸಾರಿದ್ದಾರೆ’ ಎಂದು ಅವರು ಪಂಜಾಬಿಯಲ್ಲಿಯೂ ಟ್ವೀಟ್‌ ಮಾಡಿದ್ದಾರೆ.

‘ನಮ್ಮ ಅಧಿಕಾರಾವಧಿಯಲ್ಲಿಯೇ ಗುರು ತೇಗ್‌ ಬಹದ್ದೂರ್‌ ಅವರ ಬಲಿದಾನ ಸ್ಮರಿಸುವ 400ನೇ ಪ್ರಕಾಶ್‌ ಪರ್ವ ಕಾರ್ಯಕ್ರಮ ನಡೆಯುತ್ತಿದೆ. ಇದು ಸಿಖ್‌ ಧರ್ಮ ಗುರುಗಳ ವಿಶೇಷ ಕೃಪೆ ಎಂದೇ ಭಾವಿಸುವೆ. ಈ ಸಂದರ್ಭದಲ್ಲಿ ಗುರು ತೇಗ್‌ ಬಹದ್ದೂರ್‌ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.