ADVERTISEMENT

‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯ ಫಲಾನುಭವಿ ಮನೆಯಲ್ಲಿ ಚಹಾ ಸೇವಿಸಿದ ಮೋದಿ

ಪಿಟಿಐ
Published 30 ಡಿಸೆಂಬರ್ 2023, 15:48 IST
Last Updated 30 ಡಿಸೆಂಬರ್ 2023, 15:48 IST
   

ಅಯೋಧ್ಯೆ: ಪ್ರಧಾನಿ ಮೋದಿ ಅವರು ಅಯೋಧ್ಯೆಯಲ್ಲಿ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯ ಫಲಾನುಭವಿಯೊಬ್ಬರ ಮನೆಗೆ ಭೇಟಿ ನೀಡಿ, ಚಹಾ ಸೇವಿಸಿದರು. 

ಉಜ್ವಲ ಯೋಜನೆಯ ಫಲಾನುಭವಿಗಳ ಸಂಖ್ಯೆ 10 ಕೋಟಿ ದಾಟಿದೆ. ಅಯೋಧ್ಯೆಯ ಮೀರಾ ಅವರು ಈ ಯೋಜನೆ ಪಡೆದುಕೊಂಡಾಗ ಫಲಾನುಭವಿಗಳ ಸಂಖ್ಯೆ 10 ಕೋಟಿ ಮೈಲಿಗಲ್ಲು ತಲುಪಿತ್ತು. ಅವರ ಮನೆಗೆ ಪ್ರಧಾನಿ ಶನಿವಾರ ಭೇಟಿ ನೀಡಿ, ಕುಟುಂಬ ಸದಸ್ಯರೊಂದಿಗೆ ಕುಶಲೋಪರಿ ನಡೆಸಿದರು.

‘ಚಹಾ ಚೆನ್ನಾಗಿದೆ, ಆದರೆ ಸಿಹಿ ಸ್ವಲ್ಪ ಹೆಚ್ಚಿದೆ’ ಎನ್ನುತ್ತಾ ಪ್ರಧಾನಿ ನಗು ಬೀರಿದರು. ಕೇಂದ್ರ ಸರ್ಕಾರದ ಯೋಜನೆಯಿಂದಾಗಿ ಮನೆ ಹಾಗೂ ಅಡುಗೆ ಅನಿಲ ಸಂಪರ್ಕ ಪಡೆದುಕೊಂಡೆ ಎಂದು ಮೀರಾ ಅವರು ಪ್ರಧಾನಿಗೆ ತಿಳಿಸಿದರು.

ADVERTISEMENT

ಮೀರಾ ಮನೆಗೆ ಮೋದಿ ಅವರು ಕಿರಿದಾದ ಹಾದಿಯಲ್ಲಿ ಸಾಗುವಾಗ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಸ್ಥಳೀಯರು, ‘ಮೋದಿ.. ಮೋದಿ...’ ಎನ್ನುತ್ತಾ ಸ್ವಾಗತ ಕೋರಿದರು. ಇದೇ ವೇಳೆ ಬಾಲಕನೊಬ್ಬ ತಾನು ಬಿಡಿಸಿದ ರಾಮಮಂದಿರದ ಚಿತ್ರವನ್ನು ಪ್ರಧಾನಿಗೆ ತೋರಿಸಿ, ಹಸ್ತಾಕ್ಷರ ಪಡೆದುಕೊಂಡ.

ಹೂಮಳೆ ಸುರಿಸಿದ ಇಕ್ಬಾಲ್‌ ಅನ್ಸಾರಿ: ರೋಡ್‌ ಶೋ ವೇಳೆ ಪ್ರಧಾನಿ ಮೋದಿ ಅವರ ವಾಹನದತ್ತ ಹೂಮಳೆ ಸುರಿಸಿದವರಲ್ಲಿ ಇಕ್ಬಾಲ್‌ ಅನ್ಸಾರಿ ಕೂಡಾ ಇದ್ದರು. 

ರಾಮಜನ್ಮಭೂಮಿ– ಬಾಬರಿ ಮಸೀದಿ ನಿವೇಶನ ವಿವಾದದ ಅರ್ಜಿದಾರರಲ್ಲಿ ಇಕ್ಬಾಲ್‌ ಒಬ್ಬರಾಗಿದ್ದರು. ‘ಅವರು (ಮೋದಿ) ನಾವಿರುವ ಸ್ಥಳಕ್ಕೆ ಬಂದಿದ್ದಾರೆ. ಅವರು ನಮ್ಮ ಅತಿಥಿ’ ಎಂದು ಅನ್ಸಾರಿ ಹೇಳಿದರು. ರೋಡ್‌ ಶೋ, ಪಾಂಜಿ ತೊಲಾ ಎಂಬಲ್ಲಿಗೆ ತಲುಪಿದಾಗ ಅನ್ಸಾರಿ ಅವರು ಹೂವಿನ ಪಕಳೆಗಳನ್ನು ಎಸೆದು ಸ್ವಾಗತ ಕೋರಿದರು.

ಇಕ್ಬಾಲ್‌ ಅವರು ನಿವೇಶನ ವಿವಾದ ಪ್ರಕರಣದ ಅತಿ ಹಳೆಯ ಅರ್ಜಿದಾರ ಹಾಶಿಂ ಅನ್ಸಾರಿಯ ಮಗ. ಹಾಶಿಂ ಅವರು 2016 ರಲ್ಲಿ ತಮ್ಮ 95ನೇ ವಯಸ್ಸಿನಲ್ಲಿ ಮೃತಪಟ್ಟಿದ್ದರು. ಆ ಬಳಿಕ ಇಕ್ಬಾಲ್‌, ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.