ಅಮಿತ್ ಶಾ, ನರೇಂದ್ರ ಮೋದಿ
(ಪಿಟಿಐ ಸಂಗ್ರಹ ಚಿತ್ರ)
ನವದೆಹಲಿ: ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರ ನಿಗ್ರಹಕ್ಕೆ ಭಾರತೀಯ ಸೇನೆ ಮೇ 7ರಿಂದ ನಡೆಸಿದ ಆಪರೇಷನ್ ಸಿಂಧೂರ ಕುರಿತ ಚರ್ಚೆಯಲ್ಲಿ ಭಯೋತ್ಪಾದನೆ ನಿರ್ಮೂಲನೆ, ರಾಷ್ಟ್ರದ ಭದ್ರತೆ ಮತ್ತು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನರೇಂದ್ರ ಮೋದಿ, ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಮಾತಿಗೆ ‘ಅದ್ಭುತ’ ಎಂದು ಪ್ರತಿಕ್ರಿಯಿಸಿದ್ದಾರೆ.
‘ಭಯೋತ್ಪಾದನೆ ಕುರಿತು ಜಗತ್ತಿನ ಗಮನ ಸೆಳೆಯುವ ನಿಟ್ಟಿನಲ್ಲಿ ಭಾರತವು ಸಂಪೂರ್ಣ ಪ್ರಯತ್ನ ಮಾಡಿದೆ. ಅದರಲ್ಲೂ ಆಪರೇಷನ್ ಸಿಂಧೂರ ಮೂಲಕ ಭಯೋತ್ಪಾದನೆ ಮೇಲಿನ ಪ್ರಹಾರ ಮತ್ತು ತನ್ನ ನಾಗರಿಕರ ರಕ್ಷಣೆಗೆ ಸರ್ಕಾರ ಕೈಗೊಂಡ ಕ್ರಮವನ್ನು ಇಡೀ ಜಗತ್ತೇ ನೋಡುತ್ತಿದೆ’ ಎಂದು ಮೋದಿ ಹೇಳಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕರ ದಾಳಿ ಮತ್ತು ಆಪರೇಷನ್ ಸಿಂಧೂರ ಕುರಿತು ಅಮಿತ್ ಶಾ ಮತ್ತು ಜೈಶಂಕರ್ ಅವರು ರಾಜ್ಯಸಭೆಯಲ್ಲಿ ಬುಧವಾರ ಮಾತನಾಡಿದ್ದರು. ರಾಜ್ಯಸಭೆಯಲ್ಲಿ ಆಡಳಿತ ಪಕ್ಷದ ಅಧ್ಯಕ್ಷರೂ ಆಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಮಾತುಗಳನ್ನೂ ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.